Advertisement

ಕಲಬುರಗಿ-ಮುಂಬೈ ನೇರ ವಿಮಾನ ಆರಂಭ

06:38 PM Mar 26, 2021 | Team Udayavani |

ಕಲಬುರಗಿ: ದೇಶದ ವಾಣಿಜ್ಯ ನಗರಿ, ನೆರೆಯ ಮಹಾರಾಷ್ಟ್ರದ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ನಡುವೆ
ಗುರುವಾರದಿಂದ ಅಲಯನ್ಸ್‌ ಏರ್‌ ಸಂಸ್ಥೆಯ ನೇರ ವಿಮಾನ ಸಂಚಾರ ಆರಂಭವಾಗಿದೆ. ಇನ್ಮುಂದೆ ಕೇವಲ ಒಂದೂವರೆ ಗಂಟೆಯಲ್ಲಿ ಕಲಬುರಗಿಯಿಂದ
ಮುಂಬೈಗೆ ತಲುಪಬಹುದು ಮತ್ತು ಮುಂಬೈನಿಂದ ಕಲಬುರಗಿಗೆ ಬರಬಹುದಾಗಿದೆ.

Advertisement

ಗುರುವಾರ ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಗ್ಗೆ 9:07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಮುಂಬೈನಿಂದ ಎಂಟು ಜನ ಪ್ರಯಾಣಿಕರು ಬಂದರು. ಏರ್‌ಪೋರ್ಟ್‌ಗೆ ಇಳಿದ ಕೂಡಲೇ ಅಗ್ನಿಶಾಮಕ ವಾಹನಗಳ ಮೂಲಕ ವಿಮಾನಕ್ಕೆ ವಾಟರ್‌ ಸೆಲ್ಯೂಟ್‌ ಮಾಡಲಾಯಿತು. ನಂತರ ಇಲ್ಲಿನ ವಿಮಾನ ನಿಲ್ದಾಣದಿಂದ ಬೆಳಗ್ಗೆ 9:40ಕ್ಕೆ ಹಾರಾಟ ಆರಂಭಿಸಿತು. ಮುಂಬೈಗೆ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು.

70 ಸೀಟು ಸಾಮರ್ಥ್ಯದ ಈ ವಿಮಾನವು ವಾರದ ಎಲ್ಲ ದಿನವೂ ಮುಂಬೈ-ಕಲಬುರಗಿ ಮಧ್ಯೆ ವಿಮಾನ ಹಾರಾಟ ನಡೆಸಲಿದೆ. ನಿತ್ಯ ಮುಂಬೈನಿಂದ ಬೆಳಗ್ಗೆ 7:20ಕ್ಕೆ ಹೊರಡಲಿದೆ. 9 ಗಂಟೆಗೆ ಇಲ್ಲಿಗೆ ಬಂದಿಳಿಯಲಿದೆ. ಮರಳಿ ಕಲಬುರಗಿ ಯಿಂದ 9:25ಕ್ಕೆ ತೆರಳಿ, 10:55ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲಿದೆ.

ಅಲಯನ್ಸ್‌ ಏರ್‌ ಮತ್ತು ಸ್ಟಾರ್‌ ಏರ್‌ ಸಂಸ್ಥೆಗಳು ಈಗಾಗಲೇ ಕಲಬುರಗಿಯಿಂದ ಬೆಂಗಳೂರು, ದೆಹಲಿ, ತಿರುಪತಿ ನಡುವೆ ವಿಮಾನ ಸಂಚಾರ ನಡೆಸುತ್ತಿವೆ. ಇದೀಗ ಮುಂಬೈಗೂ ವಿಮಾನ ಸೇವೆ ಆರಂಭವಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣದ ತನ್ನ ವ್ಯಾಪ್ತಿಯನ್ನು 4 ಪ್ರಮುಖ ನಗರಗಳಿಗೆ ವಿಸ್ತರಿಸಿಕೊಂಡಂತೆ ಆಗಿದೆ.

ಕೊರೊನಾ ಮುನ್ನೆಚ್ಚರಿಕೆ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿರುವ ಮಧ್ಯೆಯೂ ಅಲಯನ್ಸ್‌ ಏರ್‌ ವಿಮಾನ ಹಾರಾಟ ಸಂಚಾರ ಆರಂಭಿಸಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ. ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆಯ ಆರ್ ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿ ಮಾಡಲಾಗಿದೆ. ಕೊರೊನಾ ಕುರಿತ ತಪಾಸಣೆಗಾಗಿ ನಾಗರಿಕ ವಿಮಾನಯಾನ ಇಲಾಖೆ, ರಾಜ್ಯ ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಲಾಗಿದೆ.

Advertisement

ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್ ಮತ್ತು ಮಾಸ್ಕ್ ಧರಿಸುವಿಕೆ ಕಡ್ಡಾಯ ಮಾಡುವುದರೊಂದಿಗೆ ಕೊರೊನಾ ನೆಗೆಟಿವ್‌ ವರದಿ ತರದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಮಾದರಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಮುಂಬೈನಿಂದ ಬರುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್‌ ವರದಿ ಅಗತ್ಯವಾಗಿದೆ.
ವರದಿ ಹೊಂದಿರದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೇ, ರ್ಯಾಪಿಡ್‌ ಪರೀಕ್ಷೆ ಸಹ ಮಾಡುವ ವ್ಯವಸ್ಥೆ ಇದೆ. ಯಾವುದೇ ಭೀತಿ ಇಲ್ಲದೇ ಪ್ರಯಾಣಿಸಬಹುದು. ವಿಮಾನ ನಿಲ್ದಾಣ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ತಿಳಿಸಿದ್ದಾರೆ.

ವಾಣಿಜ್ಯ ಟಿಕೆಟ್‌ ದರ
ಕಲಬುರಗಿ ಮತ್ತು ಮುಂಬೈ ನಡುವಿನ ವಿಮಾನದ ಪ್ರಯಾಣ ಟಿಕೆಟ್‌ ದರವು ವಾಣಿಜ್ಯವಾಗಿದೆ. ಹೀಗಾಗಿ ಟಿಕೆಟ್‌ ಬೆಲೆಯಲ್ಲಿ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ. ಉಡಾನ್ ಯೋಜನೆಯಡಿ ಆಗಿದ್ದರೆ ಅಗ್ಗದ ದರದಲ್ಲಿ ಪ್ರಯಾಣಿಸಬಹುದಾಗಿತ್ತು. ವಿಮಾನದ ಒಟ್ಟು ಸೀಟುಗಳಲ್ಲಿ ಶೇ.50 ಸೀಟುಗಳಿಗೆ ಟಿಕೆಟ್‌ನಲ್ಲಿ ವಿನಾಯಿತಿ ದೊರೆಯುತ್ತಿತ್ತು.

ಕಲಬುರಗಿ ಮತ್ತು ಮುಂಬೈ ನಡುವೆ ವಿಮಾನ ಹಾರಾಟಕ್ಕಾಗಿ ಸಾಕಷ್ಟು ಬಹು ಬೇಡಿಕೆ ಇತ್ತು. ಇದೀಗ ಅಲಯನ್ಸ್‌ ಏರ್‌ ಸಂಸ್ಥೆಯ ನೇರ ವಿಮಾನ ಸಂಚಾರ ಆರಂಭಿಸುವ ಮೂಲಕ ಜನರ ನಿರೀಕ್ಷೆ ಪೂರೈಸಿದೆ . ಈ ವಿಮಾನ ಕಲಬುರಗಿ ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ಜನರಿಗೆ ಉಪಯೋಗವಾಗಲಿದೆ.
ಜ್ಞಾನೇಶ್ವರರಾವ್‌, ನಿರ್ದೇಶಕ,
ಕಲಬುರಗಿ ವಿಮಾನ ನಿಲ್ದಾಣ

Advertisement

Udayavani is now on Telegram. Click here to join our channel and stay updated with the latest news.

Next