Advertisement

ಸ್ಮಾರ್ಟ್‌ ಪಾರ್ಕಿಂಗ್‌ಗೆ ಹಸಿರು ನಿಶಾನೆ

06:29 AM Mar 19, 2019 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಬಲವಾಗಿ ಬೇರೂರಿರುವ ಪಾರ್ಕಿಂಗ್‌ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿ ರೂಪಿಸಿರುವ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಶೀಘ್ರದಲ್ಲಿಯೇ 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳ್ಳಲಿದೆ. 

Advertisement

ನಗರದಲ್ಲಿ ಅವೈಜ್ಞಾನಿಕ ವಾಹನ ನಿಲುಗಡೆಯಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಸಮಸ್ಯೆ ನಿವಾರಣೆಗೆ ಪಾಲಿಕೆ ಯೋಜನೆ ರೂಪಿಸಿದೆ. ಆ ಹಿನ್ನೆಲೆಯಲ್ಲಿ ನಗರದ 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲು ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಕಳುಹಿಸಿತ್ತು. ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದ್ದು, ನಿತ್ಯಾ ನಾಯರ್‌ ಎಂಬ ಗುತ್ತಿಗೆದಾರರಿಗೆ ಯೋಜನೆ ಕಾರ್ಯಾದೇಶ ನೀಡಲು ಪಾಲಿಕೆ ಮುಂದಾಗಿದೆ.

ಅದರಂತೆ ಗುತ್ತಿಗೆದಾರರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಿದ್ದಾರೆ. ಅದಕ್ಕೆ ಬದಲಾಗಿ ಗುತ್ತಿಗೆದಾರರು ಬಿಬಿಎಂಪಿಗೆ ವಾರ್ಷಿಕ 31.60 ಕೋಟಿ ರೂ. ಪಾವತಿಸಲಿದ್ದು, ಮುಂದಿನ 10 ವರ್ಷದವರೆಗೆ ಗುತ್ತಿಗೆದಾರರು ಸ್ಮಾರ್ಟ್‌ ಪಾಕಿಂಗ್‌ ವ್ಯವಸ್ಥೆ ನಿರ್ವಹಿಸಲಿದ್ದಾರೆ. ಅದರಂತೆ ಪ್ರತಿ ವರ್ಷ ಶೇ.5 ಆದಾಯ ಹೆಚ್ಚಳ ಮಾಡಿ 10 ವರ್ಷದಲ್ಲಿ ಬಿಬಿಎಂಪಿಗೆ 397.46 ಕೋಟಿ ರೂ. ಪಾವತಿಸಲಿದ್ದಾರೆ.

ನಗದು ರಹಿತ ಶುಲ್ಕ ಪಾವತಿ: ಪಾಲಿಕೆಯಿಂದ ರೂಪಿಸಿರುವ ನಿಯಮಗಳಂತೆ ಶುಲ್ಕ ಪಾವತಿ ಮತ್ತು ಟಿಕೆಟ್‌ ನೀಡುವುದಕ್ಕೆ ಪಾರ್ಕಿಂಗ್‌ ಮೀಟರ್‌ಗಳನ್ನು ಅಳವಡಿಸಬೇಕು. ಜತೆಗೆ ವಾಹನವು ನಿಲುಗಡೆ ಸ್ಥಳ ಪ್ರವೇಶಿಸಿದಾಗ ಪಾರ್ಕಿಂಗ್‌ ಮೀಟರ್‌ ಮೂಲಕ ಸ್ವಯಂಚಾಲಿತವಾಗಿ ಟಿಕೆಟ್‌ ಪಡೆಯುವ ವ್ಯವಸ್ಥೆ ಮಾಡಬೇಕು. ನಂತರ ಅಲ್ಲಿಂದ ಹೊರಡುವಾಗ ಪಾರ್ಕಿಂಗ್‌ ಮೀಟರ್‌ನಲ್ಲಿ ಟಿಕೆಟ್‌ನಲ್ಲಿನ ಬಾರ್‌ ಕೋಡ್‌ ತೋರಿಸಿದರೆ ಎಷ್ಟು ಶುಲ್ಕವಾಗಿದೆ ಎಂಬುದನ್ನು ಅದು ತಿಳಿಸುವ ವ್ಯವಸ್ಥೆ ಇರಬೇಕು.

ಜತೆಗೆ ಕ್ರೆಟಿಡ್‌, ಡೆಬಿಟ್‌ ಅಥವಾ ನಿತ್ಯ ನಿಲುಗಡೆ ಮಾಡುವ ವಾಹನ ಚಾಲಕರಿಗಾಗಿ ನೀಡಲಾಗುವ ಸ್ಮಾರ್ಟ್‌ಕಾರ್ಡ್‌ ಮೂಲಕ ಶುಲ್ಕ ಪಾವತಿಸಲು ಅವಕಾಶವಿರಲಿದೆ. ಇದರೊಂದಿಗೆ ವಾಹನ ನಿಲುಗಡೆ ಸ್ಥಳದಲ್ಲಿನ ಸುರಕ್ಷತೆ ದೃಷ್ಟಿಯಿಂದಾಗಿ ಸಿಸಿ ಕ್ಯಾಮೆರಾ, ಮ್ಯಾಗ್ನೆಟಿಕ್‌ ಐಆರ್‌ ಸೆನ್ಸರ್‌ ಅಳವಡಿಸಲಿದ್ದು, ವಾಹನ ಸವಾರರ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಹೆಲ್ಪ್ ಡೆಸ್ಕ್ ಕೂಡ ಸ್ಥಾಪನೆಯಾಗಲಿದೆ.

Advertisement

13,600 ವಾಹನ ನಿಲುಗಡೆ: ಸಂಸ್ಥೆಗೆ ಶೀಘ್ರದಲ್ಲಿ ಕಾರ್ಯಾದೇಶ ನೀಡಲಾಗುತ್ತಿದೆ. ಅದಾದ ಮೂರು ತಿಂಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಬಿಬಿಎಂಪಿ ಗುರುತಿಸಿರುವ ಎಲ್ಲ 85 ರಸ್ತೆಗಳಲ್ಲಿ 3,600 ಕಾರು ಹಾಗೂ 10 ಸಾವಿರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆ ಮೂಲಕ ಪ್ರಮುಖ ರಸ್ತೆಗಳಲ್ಲಿನ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೂರು ವಿಧದ ರಸ್ತೆಗಳು: ನಗರದಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆಗಳ ಗುಣಮಟ್ಟ ಆಧರಿಸಿ ವಾಹನ ನಿಲುಗಡೆ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂದು ಮೂರು ಭಾಗ ಮಾಡಲಾಗಿದೆ. ಅದರಂತೆ ಎ ವರ್ಗದಲ್ಲಿ 14, ಬಿ ವರ್ಗದಲ್ಲಿ 46 ಹಾಗೂ ಸಿ ವರ್ಗದಲ್ಲಿ 25 ರಸ್ತೆಗಳನ್ನು ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಅಂದಾಜು ಶುಲ್ಕ (ಪ್ರತಿ ಗಂಟೆಗೆ)
ಪ್ರೀಮಿಯಂ

-ದ್ವಿಚಕ್ರವಾಹನ    15 ರೂ.
-ನಾಲ್ಕು ಚಕ್ರ ವಾಹನ    30 ರೂ.

ವಾಣಿಜ್ಯ
-ದ್ವಿಚಕ್ರ ವಾಹನ    10 ರೂ.
-ನಾಲ್ಕು ಚಕ್ರ ವಾಹನ    20 ರೂ.

ಸಾಮಾನ್ಯ
-ದ್ವಿಚಕ್ರ ವಾಹನ    5 ರೂ.
-ನಾಲ್ಕು ಚಕ್ರ ವಾಹನ    15 ರೂ.

ಯೋಜನೆ ಕುರಿತು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮರು ಟೆಂಡರ್‌ ಕರೆಯುವಂತೆ ಸರ್ಕಾರ ಸೂಚಿಸಿತ್ತು. ಪಾರ್ಕಿಂಗ್‌ ನೀತಿಯಿಂದ ಬಿಬಿಎಂಪಿಗೆ ಮುಂದಿನ ಹತ್ತು ವರ್ಷದಲ್ಲಿ 400 ಕೋಟಿ ರೂ. ಆದಾಯ ಬರಲಿರುವ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರವೇ ವಾಹನ ಪಾರ್ಕಿಂಗ್‌ ದರ ನಿಗದಿ ಪಡಿಸಿ, ಯೋಜನೆ ಜಾರಿಗೆ ಅನುಮೋದನೆ ನೀಡಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next