ಬೆಂಗಳೂರು: ರಾಜ್ಯದ ಹಜ್ ಯಾತ್ರಿಕರ ಕೋಟಾ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ನಗರದ ಹಜ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2019ನೇ ಸಾಲಿನ ಹಜ್ ಯಾತ್ರೆಯ ಅರ್ಜಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವರ್ಷ ಕಳೆದಂತೆ ರಾಜ್ಯದಿಂದ ಹಜ್ ಯಾತ್ರೆ ಕೈಗೊಳ್ಳುವ ಆಕಾಂಕ್ಷಿಗಳ ಮತ್ತು ಅರ್ಜಿಗಳ ಸಂಖ್ಯೆ ಏರುತ್ತಲೇ ಇದೆ. ಹೆಚ್ಚಿನ ಜನರಿಗೆ ಅವಕಾಶ ಸಿಗಬೇಕಾದರೆ ರಾಜ್ಯದ ಕೋಟಾ ಹೆಚ್ಚಳವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಕಳೆದ ಬಾರಿ ರಾಜ್ಯ ಹಜ್ ಸಮಿತಿಗೆ 18,427 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 6624 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಆಸೆ, ಅರ್ಹತೆ ಹೊಂದಿದ್ದ ಅನೇಕರಿಗೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ಕಳೆದ ಬಾರಿಗಿಂತ ಈ ವರ್ಷದ ಕೋಟಾದಲ್ಲಿ ಕನಿಷ್ಠ 2,500 ಹೆಚ್ಚಳ ಮಾಡುವಂತೆ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ವ್ಯವಹಾರಗಳ ಸಚಿವ ಮುಖಾ¤ರ್ ಅಬ್ಟಾಸ್ ನಖೀ ಅವರನ್ನು ಭೇಟಿ ಮಾಡಿ ಒತ್ತಡ ತರಲಾಗುವುದು ಎಂದು ಸಚಿವರು ಹೇಳಿದರು.
ಕೇಂದ್ರ ಹಜ್ ಸಮಿತಿಯು ಹಜ್ ಯಾತ್ರೆಗೆ ತಲಾ 2.30 ಲಕ್ಷ ರೂ. ಪಡೆಯುತ್ತಿದೆ. ಈ ಪೈಕಿ ವಿಮಾನ ಪ್ರಯಾಣ ದರಕ್ಕೆ 76 ಸಾರ ರೂ. ವೆಚ್ಚವಾಗುತ್ತದೆ. ಒಂದು ವೇಳೆ ನಾವೇ ವಿಮಾನ ಪ್ರಯಾಣದ ಟೆಂಡರ್ ಮಾಡಿದರೆ 33 ಸಾವಿರ ರೂ.ಗಳಾಗಬಹುದು. ಅದಕ್ಕೆ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಕೋಟಾ ನಮಗೆ ನೀಡಿದರೆ ಸಾಕು, ಉಳಿದ ವ್ಯವಸ್ಥೆಯನ್ನು ನಾವೇ ಮಾಡಿಕೊಂಡರೆ ಯಾತ್ರಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಖಾಸಗಿ ಏಜೆನ್ಸಿಗಳ ಬಗ್ಗೆ ಎಚ್ಚರ: ಕಳೆದ ಬಾರಿ ಹಜ್ ಯಾತ್ರೆ ವೇಳೆ ನೂರಾರು ಜನರನ್ನು ವಂಚಿಸಿದ “ಹರೀಮ್ ಟೂರ್ ಏಜೆನ್ಸಿ’ ಪ್ರಕರಣ ಪ್ರಸ್ತಾಪಿಸಿದ ಸಚಿವರು, ಪವಿತ್ರ ಹಜ್ ಮತ್ತು ಉಮ್ರಾ ಯಾತ್ರೆ ಹೆಸರಲ್ಲಿ ವಂಚನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳಬಯಸುವವರು ಅರ್ಜಿ ಸಲ್ಲಿಸುವ ಮೊದಲು ಆ ಸಂಸ್ಥೆಯ ಪರವಾನಗಿ ಖಾತರಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿ,
ಹರೀಮ್ ಟೂರ್ನಿಂದ ವಂಚನೆಗೊಳಗಾದ 138 ಮಂದಿಯನ್ನು 2019ನೆ ಸಾಲಿನ ಹಜ್‌ಯಾತ್ರೆ ವೇಳೆ ಯಾವುದೇ ಲಾಟರಿ ಇಲ್ಲದೆ, ನೇರವಾಗಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇವರ ಪೈಕಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 15ರಿಂದ 20 ಮಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಜ್ ಯಾತ್ರೆಗೆ ಕಳುಹಿಸುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್. ರೋಷನ್‌ಬೇಗ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸಫರಾಜ್ ಖಾನ್ ಸರ್ದಾರ್ ಉಪಸ್ಥಿತರಿದ್ದರು.