Advertisement
ಜಯನಗರದ ವಾಣಿಜ್ಯ ಸಂಕೀರ್ಣದಲ್ಲಿ ಬಿಜೆಪಿ ನಗರ ಘಟಕ ಶನಿವಾರ ಹಮ್ಮಿಕೊಂಡಿದ್ದ “ಸಂಘಟನಾ ಪರ್ವ-ಸದಸ್ಯತಾ ಅಭಿಯಾನ’ದಲ್ಲಿ ಆಟೋ ಚಾಲಕರು, ಪೌರಕಾರ್ಮಿಕರು, ಸೆಕ್ಯುರಿಟಿ ಗಾರ್ಡ್‌ನಿಂದ ಹಿಡಿದು ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಸಾಧಕರಿಗೆ ಬಿಜೆಪಿಯ ಸದಸ್ಯತ್ವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Related Articles
Advertisement
ಮಾಜಿ ಸಚಿವರಾದ ರಾಮಚಂದ್ರಗೌಡ, ಮುರುಗೇಶ್ ನಿರಾಣಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರಭಾಕರ ಕೋರೆ, ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ, ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನನಗೆ ಬಿಜೆಪಿ ಸದಸ್ಯತ್ವ ನೀಡಿದ್ದು ಆಟೋ ಚಾಲಕ: “ಒಬ್ಬ ಆಟೋ ಚಾಲಕ ನನಗೆ ಬಿಜೆಪಿ ಸದಸ್ಯತ್ವ ನೀಡಿದ್ದ. ಅದರ ಪ್ರತಿಫಲವೇ ಇಂದು ನಾನು ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುತ್ತಿದ್ದೇನೆ’ ಎಂದು ಮಾಜಿ ಸಚಿವ ಸಿ.ಟಿ.ರವಿ ಮೆಲುಕುಹಾಕಿದರು. 1988ರಲ್ಲಿ ಇಂತಹದ್ದೇ ಸದಸ್ಯತ್ವ ಅಭಿಯಾನವೊಂದರಲ್ಲಿ ಚಂದ್ರು ಎಂಬ ಆಟೋ ಚಾಲಕ ನನಗೆ ಸದಸ್ಯತ್ವ ನೀಡಿದ್ದ. ಈಗಲೂ ಆ ಚಂದ್ರು ಇದ್ದಾನೆ. ಆತ ನೀಡಿದ ಸದಸ್ಯತ್ವದ ಪರಿಣಾಮ ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಬಿಜೆಪಿ ಸದಸ್ಯತ್ವ ಸ್ವೀಕರಿಸಿದ ಅಂಜು ಬಾಬಿ ಜಾರ್ಜ್: ನಗರದಲ್ಲಿ ಸಂಘಟನಾ ಪರ್ವ- ಸದಸ್ಯತಾ ಅಭಿಯಾನದಲ್ಲಿ ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಬಿಜೆಪಿ ಸದಸ್ಯತ್ವ ಸ್ವೀಕರಿಸಿದರು. ಕೇಂದ್ರ ಸಚಿವ ವಿ.ಮುರಳೀಧರನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರಿಗೆ ಪಕ್ಷದ ಶಾಲು ಹೊದಿಸಿ ಸದಸ್ಯತ್ವ ನೀಡಿ ಬರಮಾಡಿಕೊಂಡರು. ಅಂದ ಹಾಗೆ ಅಂಜು ಬಾಬಿ ಜಾರ್ಜ್ ಈ ಹಿಂದೆ ಒಲಿಂಪಿಕ್‌ನಲ್ಲಿ ಉದ್ದ ಜಿಗಿತದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದೇ ವೇಳೆ, ನಿವೃತ್ತ ಏರ್ ಮಾರ್ಷಲ್ ಮುರಳಿ ಹಾಗೂ ಇನ್ಫೋಸಿಸ್ ಉಪಾಧ್ಯಕ್ಷ ಪಾರ್ಥಸಾರಥಿ ಸದಸ್ಯತ್ವ ಸ್ವೀಕರಿಸಿದರು.