Advertisement

 ರಾಷ್ಟ್ರ ಮಟ್ಟದ ಲಗೋರಿ ಕ್ರೀಡಾಕೂಟ ಉದ್ಘಾಟನೆ 

11:10 AM Jan 07, 2018 | |

ಲಾಲ್‌ಬಾಗ್‌: ಗ್ರಾಮೀಣ ಕ್ರೀಡೆಗಳಿಗೆ ಸಮಾಜದಿಂದ ಪ್ರೋತ್ಸಾಹ ಸಿಗಬೇಕು. ಇದಕ್ಕಾಗಿ ಕ್ರೀಡಾಕೂಟಗಳನ್ನು ನಡೆಸಿ ಆ ಕ್ರೀಡೆಗಳನ್ನು ಮುಖ್ಯವಾಹಿನಿಗೆ ತರುವ ಅವಶ್ಯವಿದೆ ಎಂದು ಮೇಯರ್‌ ಕವಿತಾ ಸನಿಲ್‌ ಅಭಿಪ್ರಾಯಪಟ್ಟರು.

Advertisement

ಪಾಥ್‌ ವೇ ತಂಡದ ವತಿಯಿಂದ ಅಮೆಚೂರ್‌ ಲಗೋರಿ ಫೆಡರೇಶನ್‌ ಆಫ್‌ ಇಂಡಿಯಾದ ಸಹಯೋಗದೊಂದಿಗೆ ನಗರದ ಲಾಲ್‌ಬಾಗ್‌ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಲಗೋರಿ ಕ್ರೀಡಾಕೂಟವನ್ನು ಅವರು ಶನಿವಾರ ಉದ್ಘಾಟಿಸಿ, ಲಗೋರಿ ಆಟವು ಬಾಲ್ಯವನ್ನು ಮರುಕಳಿಸುವಂತೆ ಮಾಡುತ್ತದೆ. ಗ್ರಾಮೀಣ ಕ್ರೀಡೆಯಾದ
ಲಗೋರಿ ಇತ್ತೀಚೆಗೆ ಮರೆಯಾಗುತ್ತಿರುವ ಹಂತದಲ್ಲಿ ಪಾಥ್‌ ವೇ ತಂಡವು ಅದನ್ನು ಕ್ರೀಡಾಕೂಟವನ್ನಾಗಿ ಆಯೋಜಿಸಿ ಜನರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು. ಕ್ರಿಕೆಟ್‌ ಮುಂತಾದ ಆಟಗಳಿಗೆ ಸಿಗುವ ಪ್ರೋತ್ಸಾಹ ಗ್ರಾಮೀಣ ಕ್ರೀಡೆ ಲಗೋರಿ ಸಹಿತ ಇತರ ಕ್ರೀಡೆಗಳಿಗೂ ಲಭಿಸುವಂತಾಗಬೇಕು ಎಂದು ಅವರು ಆಶಿಸಿದರು.

ದೈಹಿಕ ಸದೃಢತೆ ಸಾಧ್ಯ
ಮುಖ್ಯ ಅತಿಥಿಯಾಗಿದ್ದ ಕಾರ್ಪೊರೇಟರ್‌ ಜಯಂತಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ, ದೈಹಿಕ ಸದೃಢತೆ ಸಾಧ್ಯ. ವಿದ್ಯಾರ್ಥಿಗಳು ಕ್ರೀಡಾಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಅಂತಾರಾಷ್ಟ್ರೀಯ ಲಗೋರಿ ರೆಫ್ರಿ  ಸಂದೀಪ್‌ ಗುರೋಲ್‌, ಪಾಥ್‌ ವೇ ಸಂಸ್ಥೆಯ ಮಾಲಕ ದೀಪಕ್‌ ಗಂಗೂಲಿ, ಲಗೋರಿ ರಾಯಭಾರಿ ಸಂಜನಾ, ನಟಿಯರಾದ ಅಪೇಕ್ಷಾ ಪುರೋಹಿತ್‌, ನೀತಾ ಮುರಳೀಧರ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರಪ್ರದೇಶ, ಹೊಸದಿಲ್ಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಾಂಡಿಚೇರಿ, ವಿಧರ್ಭ, ತೆಲಂಗಾಣ, ತಮಿಳುನಾಡು ಮತ್ತಿತರೆಡೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಭಾಗವಹಿಸುವಿಕೆ ಮುಖ್ಯ
ಸೋಲು-ಗೆಲುವು ಪ್ರತಿ ಕ್ಷೇತ್ರದಲ್ಲಿಯೂ ಇರುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ಕ್ರೀಡಾಸ್ಫೂರ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುಖಾಂತರ ವಿದ್ಯಾರ್ಥಿ ಯುವಜನರು ಬದುಕಿನಲ್ಲಿ ಯಶಸ್ಸಿನ ಔನತ್ಯಕ್ಕೇರಬೇಕು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next