ಯಾದಗಿರಿ: ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಬ್ಬರೂ ಸಂತಸದಿಂದ ಜೀವನ ಸಾಗಿಸುವುದಕ್ಕೆ ನಗುವೇ ಮುಖ್ಯವಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.
ನಗರದ ಸಹರಾ ಕಾಲೋನಿಯಲ್ಲಿರುವ ಬೀಚಿ ಉದ್ಯಾನ ವನದಲ್ಲಿ ಮಾತೋಶ್ರೀ ಬಸಮ್ಮ ಶರಬಣ್ಣ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಾಸ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ, ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಮಹಾಮನಿಯವರು ತನ್ನ ತಾಯಿ ಸ್ಮರಣೆಯಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಚ್. ವಿಜಯ ಭಾಸ್ಕರ್ ರಚಿಸಿರುವ ಇಬ್ಬರೂ ಪ್ರಚಂಡ ಪ್ರವಾದಿಗಳು ಮತ್ತು ಇಬ್ಬರು ಕುಷ್ಠರೋಗಿಗಳು ಕೃತಿ ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ:ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿ ಮಾಡಲಿ
ನಿವೃತ್ತ ಪ್ರಾಂಶುಪಾಲ ವಿಜಯರತ್ನ ಕುಮಾರ ಕೃತಿ ಕುರಿತು ಮಾತನಾಡಿದರು. ನಂತರ ಜರುಗಿದ ಹಾಸ್ಯೋತ್ಸವದಲ್ಲಿ ಖಾಸಗಿ ವಾಹಿನಿ ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ ಹಾಗೂ ಎರಡಕ್ಷರ ಖ್ಯಾತಿಯ ಬಸವರಾಜ್ ಬೆಣ್ಣಿ, ಜವಾರಿ ಹಾಸ್ಯ ಖ್ಯಾತಿಯ ಕಲಬುರಗಿ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯೋತ್ಸವ ಜರುಗಿತು.
ನಂತರ ಜರುಗಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅಮೂಲ್ಯ ಹಾಗೂ ಸಂಗಡಿಗರಿಂದ ಸಮೂಹ ನೃತ್ಯ ಹಾಗೂ ಮರೆಪ್ಪ ಶಿರವಾಳ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ ಸಾಮಾಜಿಕ ಸೇವೆಗೈದವರನ್ನು ಸತ್ಕರಿಸಲಾಯಿತು. ಪೌರಾಯುಕ್ತ ಎಚ್. ಬಕ್ಕಪ್ಪ ಹೊಸಮನಿ, ಕಸಾಪ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ನಗರಸಭೆ ಸದಸ್ಯ ಗಣೇಶ್ ದುಪ್ಪಲ್ಲಿ ಇದ್ದರು. ಟ್ರಸ್ಟ್ ಅಧ್ಯಕ್ಷ ಬಸವರಾಜ ಮಹಾಮನಿ ಪ್ರಾಸ್ತವಿಕ ಮಾತನಾಡಿದರು. ಬಸವರಾಜ ಸಿನ್ನೂರ ನಿರೂಪಿಸಿದರು. ಅಶ್ವಿನಿ ಹೊಸಪೇಟೆ ಸ್ವಾಗತಿಸಿದರು. ಮಹೇಶ್ ವಂದಿಸಿದರು.