Advertisement

ಲ್ಯಾಟಿನ್‌ ಅಮೆರಿಕ ಹೊಸ ಸಂಕಷ್ಟಗಳಿಗೆ ಮುನ್ನುಡಿ

03:41 PM May 04, 2020 | sudhir |

ನ್ಯೂಯಾರ್ಕ್‌: ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಲ್ಯಾಟಿನ್‌ ಅಮೆರಿಕ ದೇಶಗಳಲ್ಲಿ ಕೋವಿಡ್‌ 19 ಹೊಸ ಸಂಕಷ್ಟಗಳಿಗೆ ಕಾರಣವಾಗುತ್ತಿದೆ. ಇಲ್ಲಿನ ರಾಜಕೀಯ ಹಾಗೂ ಆರ್ಥಿಕ ಸ್ಥಿತಿಯು ಬಿಕ್ಕಟ್ಟಿನಲ್ಲಿರುವಾಗಲೇ ಕೋವಿಡ್ ದಾಳಿ ನಡೆಸಿರುವುದು ಅಲ್ಲಿನ ಆಡಳಿತವನ್ನು ಕಂಗೆಡಿಸಿದೆ.

Advertisement

ಆ ದೇಶಗಳಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಅದನ್ನು ಸಮರ್ಥವಾಗಿ ಎದುರಿಸುವ ವ್ಯವಸ್ಥೆಯ ಕೊರತೆಯಿದೆ. ಆದ್ದರಿಂದ ಚಾಲ್ತಿಯಲ್ಲಿರುವ ಸಮಸ್ಯೆಗಳ ಜತೆಯಲ್ಲಿ ಹೊಸ ಸವಾಲಿನ ವಿರುದ್ಧವೂ ಹೋರಾಡಬೇಕಾದ ಪರಿಸ್ಥಿತಿ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಲ್ಯಾಟಿನ್‌ ಅಮೆರಿಕ ಮಾತ್ರವಲ್ಲ, ಈಗ ಕೋವಿಡ್ ನಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಕಷ್ಟದಲ್ಲಿವೆ. ಅಂತಾರಾಷ್ಟ್ರೀಯ ವ್ಯವಹಾರಗಳ ಕೊಂಡಿ ಎಲ್ಲ ದೇಶಗಳಲ್ಲೂ ಇರುವುದು ಇದಕ್ಕೆ ಪ್ರಮುಖ ಕಾರಣ. ಲ್ಯಾಟಿನ್‌ ಅಮೆರಿಕ ದೇಶಗಳು ಸಂಪೂರ್ಣವಾಗಿ ಯುನೈಟೆಡ್‌ ಸ್ಟೇಟ್ಸ್‌, ಯುರೋಪ್‌ ಮತ್ತು ಚೀನದ ಹೂಡಿಕೆ ಹಾಗೂ ವ್ಯಾಪಾರದ ಮೇಲೆ ಅವಲಂಬಿತವಾಗಿದೆ.

ಆ ದೇಶಗಳಲ್ಲೆಲ್ಲ  ಕೋವಿಡ್ ರುದ್ರತಾಂಡವದ ಪರಿಣಾಮ ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳ ಮೇಲೆ ಸಹಜವಾಗಿಯೇ ಬೀರುತ್ತಿದೆ.
ಲ್ಯಾಟಿನ್‌ ಅಮೆರಿಕ ದೇಶದ ಆರ್ಥಿಕತೆಯು ವಿದೇಶಿ ಹೂಡಿಕೆ, ತೈಲ, ತಾಮ್ರ ಹಾಗೂ ಸತು ಮುಂತಾದ ಲೋಹಗಳ ಸರಕುಗಳ ಬೇಡಿಕೆಯ ಮೇಲೆ ಅವಲಂಬಿತವಾಗಿವೆ. ಈ ದೇಶಗಳು ವ್ಯಾವಹಾರಿಕ ಸಂಬಂಧ ಹೊಂದಿರುವ ರಾಷ್ಟ್ರಗಳೆಲ್ಲ ಸಂಕಷ್ಟದಲ್ಲಿದ್ದು, ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಬೇಡಿಕೆ ಕುಸಿತವಾಗಿದೆ. ಇದು ನೇರವಾಗಿ ಅಲ್ಲಿನ ಔದ್ಯೋಗಿಕ, ಜನರ ಜೀವನಶೈಲಿ ಮೇಲೆ ಪರಿಣಾಮ ಬೀರುತ್ತಿದೆ. ದೇಶೀಯ ಕರೆನ್ಸಿಗಳು ಅಪಮೌಲ್ಯವಾಗುತ್ತಿರುವುದೂ ಇಲ್ಲಿನ ಆರ್ಥಿಕತೆಯನ್ನು ಅತಿ ಸಂಕಷ್ಟಕ್ಕೆ ತಳ್ಳುವ ಭೀತಿ ಎದುರಾಗಿದೆ. ವಿದೇಶಿ ಹೂಡಿಕೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗುವ ಅಪಾಯ ಕಂಡುಬಂದಿದೆ. ಬೆಲೆ ಏರಿಕೆ ಸಮಸ್ಯೆಯೂ ಉದ್ಭವಿಸಲಿದೆ. ಇವೆಲ್ಲ ಆ ರಾಷ್ಟ್ರಗಳ ಆರ್ಥಿಕ ದುಃಸ್ಥಿತಿಗೆ ಕಾರಣವಾಗುವುದು ಖಚಿತ ಎಂಬುದು ಆರ್ಥಿಕ ಪರಿಣಿತರ ಅಭಿಪ್ರಾಯ.

2008-2009ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಈಗ ಅದಕ್ಕಿಂತಲೂ ಪರಿಸ್ಥಿತಿ ಹದಗೆಟ್ಟಿದೆ. ಸಾಲಗಳು ಹೆಚ್ಚಾಗುತ್ತಿದ್ದು, ಜನರ ಜೀವನ ಮಟ್ಟವೂ ಕುಸಿಯುತ್ತಿದೆ. ಪ್ರವಾಸೋದ್ಯಮ ಅಧೋಗತಿಗಿಳಿದಿದೆ. ಜತೆಗೆ ಬಡ ಮತ್ತು ಮಧ್ಯಮ ವರ್ಗದವರು ಕೂಡ ತೀವ್ರ ತೊಂದರೆ ಅನುಭವಿಸಬೇಕಾಗಿದೆ.

Advertisement

ಲ್ಯಾಟಿನ್‌ ಅಮೆರಿಕದಲ್ಲಿ ಶೇ. 55ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರು. ಇವರಿಗೆ ವಿಶೇಷ ಸಹಾಯ ಮಾಡುವ ಸ್ಥಿತಿಯಲ್ಲಿ ಸರಕಾರವೂ ಇಲ್ಲ. ಆದ್ದರಿಂದ ಈ ಕಾರ್ಮಿಕರು ಸಂಕಷ್ಟದಿಂದ ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಕೊಲಂಬಿಯಾದಲ್ಲಿ ಈಗಾಗಲೇ ಇಂಥ ಪ್ರತಿಭಟನೆಗಳು ನಡೆದಿವೆ.

ಈಗಿನ ಆರ್ಥಿಕ ಕುಸಿತವು ರಾಜಕೀಯ ಮೇಲಾಟ ಮತ್ತು ಬೆದರಿಕೆಗಳಿಗೂ ಕಾರಣವಾಗುತ್ತಿವೆ. ದಶಕದ ಹಿಂದೆಯೂ ಇದೇ ರೀತಿಯ ರಾಜಕೀಯ ಪರಿಸ್ಥಿತಿ ಸೃಷ್ಟಿಯಾಗಿತ್ತು. 2000ರ ದಶಕದಲ್ಲಿ ಎದುರಾಗಿದ್ದ ಆರ್ಥಿಕ ದುಃಸ್ಥಿತಿಯಲ್ಲಿ ಗುಲಾಬಿ ಅಲೆ ಎಂದು ಕರೆಯಲಾಗಿತ್ತು. ಬಳಿಕ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಎಡಪಂಥೀಯರನ್ನು ಜನರು ಅಧಿಕಾರದಿಂದ ದೂರವಿರಿಸಿ ಮಾರುಕಟ್ಟೆ ಸ್ನೇಹಿ ರಾಜಕೀಯ ಶಕ್ತಿಯನ್ನು ಅಧಿಕಾರಕ್ಕೆ ತಂದರು. 2014ರಲ್ಲಿ ಬೃಹತ್‌ ಒಡೆಬ್ರೆಕ್ಟ್ ಹಗರಣದಲ್ಲಿ ಹಲವು ಪ್ರಮುಖ ಎಡಪಂಥೀಯರು ಭಾಗಿಯಾಗಿದ್ದರು ಎಂದೂ ಆರೋಪಿಸಲಾಗಿತ್ತು.

ಈಗ ಕೋವಿಡ್ ಕಾರಣದಿಂದ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ ರಾಜಕೀಯ ಹಾಗೂ ಆರ್ಥಿಕವಾಗಿ ಎದುರಾಗಲಿರುವ ಗಂಭೀರ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ನಿಭಾಯಿ ಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next