ಹೊಸದಿಲ್ಲಿ/ಕುಮಟಾ: ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ನೊಂದ ಕರ್ನಾಟಕದ ವಿದ್ಯಾರ್ಥಿಯೊಬ್ಬ ದಿಲ್ಲಿಯಲ್ಲಿ ನೇಣಿಗೆ ಶರಣಾದ ಘಟನೆ ಸಂಭವಿಸಿದೆ. ರವಿವಾರ ನಡೆದ ಯುಪಿಎಸ್‌ಸಿ ಪರೀಕ್ಷೆಗೆ ತಡವಾಗಿ ಬಂದ ಕಾರಣ ವರುಣ್ ಚಂದ್ರನ್‌ಗೆ(25) ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದರಿಂದನೊಂದ ವರುಣ್ ದಿಲ್ಲಿಯ ರಾಜೇಂದ್ರನಗರದ ಬಾಡಿಗೆ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಭ್ಯರ್ಥಿ ವರುಣ್ ದೀರ್ಘಕಾಲದಿಂದ ದಿಲ್ಲಿಯಲ್ಲಿಯೇ ನೆಲೆಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಕೇಂದ್ರ ಲೋಕಸೇವಾ ಆಯೋಗವು ದೇಶಾದ್ಯಂತ ನಾಗರಿಕ ಸೇವೆಗಳಿಗಾಗಿ ಪ್ರಿಲಿಮಿನರಿ ಪರೀಕ್ಷೆಯನ್ನು ರವಿವಾರ ಹಮ್ಮಿಕೊಂಡಿತ್ತು. ಅದರಂತೆ ವರುಣ್ ಉತ್ತರ ದಿಲ್ಲಿಯ ಪಹರ್‌ಗಂಜ್‌ನಲ್ಲಿಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿತ್ತು. ಅವರು ತಡವಾಗಿ ಆಗಮಿಸಿದ ಕಾರಣ ಪರೀಕ್ಷಾ ಸಿಬಂದಿ ಅವರಿಗೆ ಕೊಠಡಿಯೊಳಗೆ ಹೋಗಲು ಅನುವು ಮಾಡಲಿಲ್ಲ. ಇದರಿಂದ ಮನನೊಂದು ವರುಣ್ ತಮ್ಮ ಕೊಠಡಿಗೆ ವಾಪಸಾಗಿ ನೇಣುಬಿಗಿದುಕೊಂಡರು.
ಕೊಠಡಿಯಲ್ಲಿ ಅವರ ಡೆತ್ ನೋಟ್ ದೊರೆತಿದ್ದು, “ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ ಹಾಗೂ ಮರೆತುಬಿಡಿ’ ಎಂದು ಹೆತ್ತವರನ್ನು ಉದ್ದೇಶಿಸಿ ಬರೆಯಲಾಗಿದೆೆ ಎಂದು ಪೊಲೀಸರು ಹೇಳಿದ್ದಾರೆ. ಜತೆಗೆ ತಡವಾಗಿ ಬಂದರೂ ಪರೀಕ್ಷಾ ಕೊಠಡಿಗೆ ಸೇರಿಸಲು ಇರುವ ಅವಕಾಶಗಳ ಬಗ್ಗೆಯೂ ಅವರು ಪತ್ರದಲ್ಲಿ ಬರೆದಿದ್ದಾರೆ.
ಗೆಳತಿಯಿಂದ ಬಹಿರಂಗ: ವರುಣ್‌ನ ಗೆಳತಿಯೂ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಪರೀಕ್ಷೆ ಮುಗಿಸಿ ವಾಪಸಾದಾಗಿನಿಂದ ವರುಣ್‌ಗೆ ನಿರಂತರವಾಗಿ ಕರೆ ಮಾಡಿದ್ದಳು. ಆದರೆ ವರುಣ್ ಕರೆ ಸ್ವೀಕರಿಸಿರಲಿಲ್ಲ. ಇಡೀ ದಿನ ಪ್ರತಿಕ್ರಿಯೆ ಬಾರದ ಕಾರಣ ಆಕೆ ನೇರವಾಗಿ ವರುಣ್ ಇದ್ದ ಕೊಠಡಿಗೆ ತೆರಳಿ ಬಾಗಿಲು ಬಡಿದಳು. ಬಾಗಿಲು ತೆರೆಯದೇ ಇದ್ದ ಕಾರಣ, ಕಿಟಕಿ ಮೂಲಕ ಇಣುಕಿ ನೋಡಿದಾಗ ವರುಣ್ ನೇಣಿಗೆ ಶರಣಾಗಿದ್ದು ಬೆಳಕಿಗೆ ಬಂದಿದೆ. ಬಳಿಕ ಆಕೆಯೇ ಕರೆ ಮಾಡಿ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ಕಲಿತಿದ್ದ ವರುಣ್
ವರುಣ್ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ| ಸುಭಾಸಚಂದ್ರನ್ ಅವರ ಪುತ್ರ. ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿತಿದ್ದ ವರುಣಚಂದ್ರನ್ ಯುಪಿಎಸ್‌ಸಿ ಪರೀಕ್ಷೆ ಬರೆಯಲು ದಿಲ್ಲಿಗೆ ತೆರಳಿದ್ದ.