ಮುಂಬೈ: ಕೋವಿಡ್ 19 ಸೋಂಕಿಗೆ ಒಳಗಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್ ಅವರು ಇನ್ನೂ ತೀವ್ರ ನಿಗಾ ಘಟಕ (ಐಸಿಯು) ನಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಕೆಲ ರೋಗ ಲಕ್ಷಣಗಳೊಂದಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ಅವರನ್ನು ಜನವರಿ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪ್ರತಿತ್ ಸಂದಾನಿ, “ ಲತಾ ಮಂಗೇಶ್ಕರ್ ಅವರಿಗೆ ಇನ್ನೂ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಆರೋಗ್ಯದ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಲತಾ ಮಂಗೇಶ್ಕರ್ ಅವರು ನಿರಾಕರಿಸಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:ರೋಹಿತ್, ರಾಹುಲ್,ಅಶ್ವಿನ್, ಬುಮ್ರಾ ಬೇಡ.. ಈತನನ್ನು ಟೆಸ್ಟ್ ಕ್ಯಾಪ್ಟನ್ ಮಾಡಿ: ಗಾವಸ್ಕರ್
ತಮ್ಮ ಏಳು ದಶಕಗಳ ವೃತ್ತಿ ಜೀವನದಲ್ಲಿ ಲತಾ ಮಂಗೇಶ್ಕರ್ ಅವರು ಸುಮಾರು 30 ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. ಭಾರತೀ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕರಲ್ಲಿ ಲತಾ ಅವರನ್ನು ಗುರುತಿಸಲಾಗುತ್ತದೆ. ಮೂರು ರಾಷ್ಟ್ರ ಪ್ರಶಸ್ತಿ, 15 ಬೆಂಗಾಲ್ ಫಿಲ್ಮ್ ಜರ್ನಲಿಸ್ಟ್ ಅಸೋಸಿಯೇಶನ್ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ.