ಉಡುಪಿ: ಉಡುಪಿ ಶ್ರೀಕೃಷ್ಣಮಠದ ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಐದನೆಯ ಶತಮಾನದ ಇತಿಹಾಸದತ್ತ ದಾಪುಗಾಲಿಡುತ್ತಿದೆ. ಮಧ್ವಾಚಾರ್ಯರು ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ ಅವಧಿ ಸರತಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಶ್ರೀವಾದಿರಾಜ ಗುರುಸಾರ್ವಭೌಮರು (1481-1601) ದ್ವೈವಾರ್ಷಿಕ ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು.
ಎರಡು ತಿಂಗಳ ಪೂಜೆಯಿಂದ ಸುದೀರ್ಘ ತೀರ್ಥಯಾತ್ರೆ, ತಣ್ತೀಪ್ರಸಾರ ಇದರಿಂದ ಸಾಧ್ಯವಾಗುತ್ತಿರಲಿಲ್ಲ. ಮಹತ್ವಪೂರ್ಣ ಕಾರ್ಯಯೋಜನೆಗಳಿಗೆ ಇದು ತೊಡಕಾಗುತ್ತಿತ್ತು. ಎರಡು ವರ್ಷದ ಪೂಜಾ ಪದ್ಧತಿ ಜಾರಿಗೊಳಿಸಿದರೆ ಆಡಳಿತಾತ್ಮಕವಾಗಿ ಅನುಕೂಲ ಎಂದು ಶ್ರೀವಾದಿರಾಜರು ಈ ನಿರ್ಧಾರವನ್ನು ತೆಗೆದುಕೊಂಡರು.
ಉತ್ತರ ಬದರಿಗೆ ಶ್ರೀವಾದಿರಾಜರು ತೆರಳಿ ಶ್ರೀಮಧ್ವಾಚಾರ್ಯರ ಅಣತಿ ಪಡೆದು ದ್ವೆ„ವಾರ್ಷಿಕ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತಂದರು. ಹಿಂದಿನಂತೆ ದ್ವೆಮಾಸಿಕ ವ್ಯವಸ್ಥೆ ಅನುಕ್ರಮಣಿಕೆಯಂತೆಯೇ ಮುಂದುವರಿಯಿತು. ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ. ಆಯಾ ಪರಂಪರೆಯ ಆದ್ಯ ಯತಿಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಇದು ಜಾರಿಗೆ ಬಂದಿದೆ. ಅನುಕ್ರಮಣಿಕೆಯಲ್ಲಿ ಈಗ ಎರಡನೆಯ ಸರದಿ ಬರುತ್ತಿದೆ.
1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆಯನ್ನು ವಾದಿರಾಜರು ಆರಂಭಿಸಿದರು. ಅನುಕ್ರಮಣಿಕೆಯಂತೆ ಹತ್ತು ವರ್ಷಗಳ ಬಳಿಕ 1532ರಲ್ಲಿ ಸ್ವಯಂ ವಾದಿರಾಜರ ಪರ್ಯಾಯ ಬಂತು. ಅನಂತರ ಅವರು 1548-49, 1564-65, 1580-81ರಲ್ಲಿ ಪರ್ಯಾಯ ಪೂಜೆ ನಡೆಸಿದರು. ತಾವೇ ಸ್ವತಃ ಪ್ರಥಮ ದ್ವೆ„ವಾರ್ಷಿಕ ಪರ್ಯಾಯ ಪೀಠವೇರುವಾಗ ಅವರಿಗೆ ಸುಮಾರು 52 ವರ್ಷ, ನಾಲ್ಕನೆಯ ಪರ್ಯಾಯದಲ್ಲಿ 100 ವರ್ಷ ಭರ್ತಿ. ಐದನೆಯ ಪರ್ಯಾಯದ 1596-97ರ ಅವಧಿಯಲ್ಲಿ ಶಿಷ್ಯ ಶ್ರೀವೇದವೇದ್ಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಸೋಂದಾ ಕ್ಷೇತ್ರದಲ್ಲಿ ತಾವು ಪರ್ಯಾ ಯವನ್ನು ನಡೆಸಿದರು. ಆಗ ವಾದಿ ರಾಜರಿಗೆ ಸುಮಾರು 116 ವರ್ಷ. 120ನೆಯ ವಯಸ್ಸಿನಲ್ಲಿ ಅವರು ಶಿರಸಿ ಸಮೀಪದ ಸೋಂದೆಯಲ್ಲಿ ವೃಂದಾ ವನಸ್ಥರಾದರು.
1522ರಿಂದ ಆರಂಭ ಗೊಂಡ ಪರ್ಯಾಯ ವ್ಯವಸ್ಥೆ ಪ್ರತಿ 16 ವರ್ಷಕ್ಕೊಮ್ಮೆ ಒಂದೊಂದೆ ಚಕ್ರವನ್ನು ಹಾದು 32ನೆಯ ಚಕ್ರದಲ್ಲಿದೆ. 31ನೆಯ ಚಕ್ರ 2016-18ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಐತಿಹಾಸಿಕ ಐದನೆಯ ಪರ್ಯಾಯದಲ್ಲಿ (248ನೆಯ) ಕೊನೆಗೊಂಡಿತು. 2018ರಲ್ಲಿ ಆರಂಭಗೊಂಡ 32ನೆಯ ಚಕ್ರದಲ್ಲಿ ಈಗ ಮೊದಲ ಪರ್ಯಾಯವಾದ 249ನೆಯ ಶ್ರೀಪಲಿಮಾರು ಮಠದ ಪರ್ಯಾಯ ಕೊನೆಗೊಂಡು 250ನೆಯ ಪರ್ಯಾಯ 2020ರ ಜನವರಿ 18ರಂದು ಆರಂಭಗೊಳ್ಳುತ್ತಿದೆ.
ಇದು ನಾಲ್ಕು ಶತಮಾನದ ಇತಿಹಾಸದಲ್ಲಿ ಕೊನೆಯ ಪರ್ಯಾಯವಾಗಿದೆ. 2022ರಲ್ಲಿ ನಡೆಯುವುದು 251ನೆಯ ಪರ್ಯಾಯ, ಐದನೆಯ ಶತಮಾನದ ಮೊದಲ ಪರ್ಯಾಯ ಎನಿಸಲಿದೆ. ಈ ಪರ್ಯಾಯ ಘಟ್ಟ ಶ್ರೀಕೃಷ್ಣಾಪುರ ಮಠದ ಶ್ರೀಗಳದ್ದಾಗಿದೆ.
ಎರಡು ತಿಂಗಳ ಅವಧಿ
ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಪ್ರತಿಷ್ಠೆಯನ್ನು ಮಧ್ವಾಚಾರ್ಯರು ನೆರವೇರಿಸಿದ ಬಳಿಕ ಆರಂಭದಲ್ಲಿ ಎರಡು ಶತಮಾನ ಎರಡು ತಿಂಗಳ ಅವಧಿಯ ಪರ್ಯಾಯ ಉತ್ಸವ ನಡೆಯುತ್ತಿದ್ದರೆ ಬಳಿಕ ಶ್ರೀ ವಾದಿರಾಜಸ್ವಾಮಿಗಳು ದ್ವೆ„ವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆಗೆ ನಾಂದಿ ಹಾಡಿದರು. ಈಗ 250ನೆಯ ಪರ್ಯಾಯ ಸಂಪನ್ನಗೊಳ್ಳುತ್ತಿದೆ.
-ವಿ| ಚಿಪ್ಪಗಿರಿ ನಾಗೇಂದ್ರಾಚಾರ್ಯ, ವಿದ್ವಾಂಸರು
ಮಾಹಿತಿ ಇಲ್ಲ
ವಾದಿರಾಜಸ್ವಾಮಿಗಳು ಎರಡು ವರ್ಷಗಳ ಪರ್ಯಾಯ ಪೂಜಾ ಕ್ರಮ ಆರಂಭಿಸುವ ಮುನ್ನ ಎರಡು ತಿಂಗಳ ಅವಧಿಯ ಪೂಜಾ ಅವಧಿ ಎಷ್ಟು ಸಮಯ ನಡೆದಿತ್ತು ಎಂಬ ಕುರಿತು ನಿಖರವಾದ ಮಾಹಿತಿಗಳು ಸಿಗುತ್ತಿಲ್ಲ. ವಾದಿರಾಜರ ಕಾಲದಲ್ಲಿ ಆರಂಭವಾದ ಅವಧಿಯನ್ನು ಮಾತ್ರ ವಿದ್ವಾಂಸರು ಪರಿಗಣಿಸುತ್ತಿದ್ದಾರೆ.
– ವಿ| ಗೋಪಾಲಾಚಾರ್ಯ, ವಿದ್ವಾಂಸರು