ಪ್ಯಾರಿಸ್: ಕಳೆದ 17 ದಿನಗಳಿಂದ ಪ್ರಣಯದೂರಿನಲ್ಲಿ ನಡೆಯುತ್ತ ಬಂದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ರವಿವಾರ ರಾತ್ರಿ ತೆರೆ ಬೀಳಲಿದೆ. ಪ್ಯಾರಿಸ್‌ನ ಹೃದಯ ಭಾಗವಾದ “ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂ’ನಲ್ಲಿ, ಭಾರತೀಯ ಕಾಲಮಾನದಂತೆ ರಾತ್ರಿ 12.30ಕ್ಕೆ ಸಮಾರೋಪ ಸಮಾರಂಭ ಆರಂಭವಾಗಲಿದೆ.
ಸಮಾರೋಪ ಸಮಾರಂಭದಲ್ಲಿ ಏನೆಲ್ಲ ಕಾರ್ಯಕ್ರಮಗಳಿರುತ್ತವೆ ಎಂಬ ಬಗ್ಗೆ ಸಂಘಟಕರು ಇನ್ನೂ ಮೌನ ಮುರಿದಿಲ್ಲ. ಆದರೆ ಅಮೆರಿಕದ ಖ್ಯಾತ ನಟ ಹಾಗೂ ನಿರ್ಮಾಪಕ ಟಾಮ್ ಕ್ರುಯಿಸ್ ಇದರಲ್ಲಿ ಭಾಗವಹಿಸುವ ಸಾಧ್ಯತೆ ನಿಚ್ಚಳವಾಗಿದೆ. ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುವುದರಿಂದ ಹಾಲಿವುಡ್ ತಂಡವೊಂದು ಪಾಲ್ಗೊಳ್ಳುವುದಾಗಿ ವರದಿಯಾಗಿದೆ. ಫ್ರೆಂಚ್ ಮತ್ತು ಅಮೆರಿಕನ್ ಕಲಾವಿದರು ಜಂಟಿಯಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪ್ರಮುಖ ಆಕರ್ಷಣೆ:
ಅಮೆರಿಕದ ಖ್ಯಾತ ರ್ಯಾಪ್ ಸಿಂಗರ್ ಸ್ನೂಪ್ ಡಾಗ್ ಕೂಡ ಸಮಾರೋಪದ ಮುಖ್ಯ ಆಕರ್ಷಣೆ ಆಗುವ ಸಾಧ್ಯತೆ ಇದೆ. ಕಲಾ ನಿರ್ದೇಶಕ ಥಾಮಸ್ ಜಾಲಿ ಹೇಳಿದ ಪ್ರಕಾರ ಈ ಕಾರ್ಯಕ್ರಮಕ್ಕೆ “ರೆಕಾರ್ಡ್ಸ್’ ಎಂದು ಹೆಸರಿಡಲಾಗಿದೆ. ವೀಕ್ಷಕರನ್ನು ಇದು ವೈಜ್ಞಾನಿಕ-ಕಾಲ್ಪನಿಕ ಕನಸಿನ ಲೋಕಕ್ಕೆ ಕರೆದೊಯ್ಯಲಿದೆ ಎಂದಿದ್ದಾರೆ.
ಕೂಟವನ್ನು ಯಶಸ್ವಿಗೊಳಿಸಿದ 45 ಸಾವಿರದಷ್ಟು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಕೆ, ಕೊನೆಯ ಸ್ಪರ್ಧೆಯಾದ ವನಿತಾ ಮ್ಯಾರಥಾನ್ ವಿಜೇತರಿಗೆ ಪದಕ ವಿತರಣೆ, ಆ್ಯತ್ಲೆಟಿಕ್ ಪರೇಡ್, ಬಳಿಕ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್ ನಗರಗಳ ಮೇಯರ್‌ಗಳು ಉಪಸ್ಥಿತರಿರುತ್ತಾರೆ.
ಇಷ್ಟು ದಿನಗಳ ಕಾಲ ಪ್ರಜ್ವಲಿಸುತ್ತಿದ್ದ ಒಲಿಂಪಿಕ್ಸ್ ಜ್ಯೋತಿ ನಿಧಾನವಾಗಿ ಆರುವುದರ ಜತೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಶ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವನ್ನು ಘೋಷಿಸಲಿದ್ದಾರೆ.