Advertisement

ಲೇಸರ್‌ ಬೆಳಕಲ್ಲಿ ಕೆಆರ್‌ಎಸ್‌ ಮಿನುಗು

08:33 AM Sep 26, 2017 | |

ಮಂಡ್ಯ: ಮೈಸೂರು ದಸರಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಜಲಾಶಯ ಲೇಸರ್‌ ಲೈಟ್‌ ಬೆಳಕಿನಲ್ಲಿ ಝಗಮಗಿಸುತ್ತಿದೆ. ಇಡೀ ಬೃಂದಾವನ ಲಕ್ಷಾಂತರ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮದಿಂದ ವಿಶೇಷವಾಗಿ ಅಣೆಕಟ್ಟೆ ಸೇರಿ ಬೃಂದಾವನಕ್ಕೆ ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ.  ಅಣೆಕಟ್ಟೆಯುದ್ದಕ್ಕೂ ಅಳವಡಿಸಿರುವ ವಿವಿಧ ವರ್ಣದ ಲೇಸರ್‌ ಲೈಟ್‌ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದೆ. 

Advertisement

ಜಲಾಶಯದ ಕಾರಂಜಿ, ಬೋಟಿಂಗ್‌ ಪಾಯಿಂಟ್‌ ಸೇರಿ ಇಡೀ ಬೃಂದಾವನವೇ ಬಣ್ಣಬಣ್ಣದ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಮಿನುಗುತ್ತಿದೆ. ನೃತ್ಯ ಕಾರಂಜಿಗೆ ಹೊಸ ಮಾದರಿಯ ಸಂಗೀತ ಅಳವಡಿಸಲಾಗಿದೆ. ನೂತನ ಧ್ವನಿ-ಬೆಳಕು ವ್ಯವಸ್ಥೆಗೆ ಪ್ರವಾ ಸಿಗರು ಫಿದಾ ಆಗಿದ್ದು, ವಿದ್ಯುತ್‌ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಕೆಆರ್‌ಎಸ್‌ನ್ನು ಕಣ್ತುಂ ಬಿಕೊಳ್ಳಲು ಪ್ರವಾಸಿಗರು ತಂಡೋಪತಂಡವಾಗಿ ಕೆಆರ್‌ಎಸ್‌ಗೆ ಲಗ್ಗೆ ಇಡುತ್ತಿದ್ದಾರೆ.

84 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ: ಕೃಷ್ಣರಾಜಸಾಗರ ಜಲಾಶಯಕ್ಕೆ ಲೇಸರ್‌ ಲೈಟ್‌ ಸ್ಪರ್ಶ ನೀಡುವುದಕ್ಕಾಗಿ 84 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಐ-ಬೀಮ್‌ ಲೈಟ್ಸ್‌, ಫೋಕಸ್‌ ಲೈಟ್‌, ದೂರಕ್ಕೆ ಬೆಳಕಿನ ಕಿರಣಗಳನ್ನು ಹಾಯಿಸುವ ರೇ-ಲೈಟ್ಸ್‌ಗಳನ್ನು ಅಳವಡಿಸಲಾಗಿದೆ. ಇವು ಅಣೆಕಟ್ಟೆಯ ಮೇಲೆ ಚಿತ್ತಾಕರ್ಷಕವಾದ ಬೆಳಕಿನ ಕಿರಣಗಳನ್ನು ಮೂಡಿಸುತ್ತಾ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿವೆ. ಬೃಂದಾವನದ ಅಣೆಕಟ್ಟೆಯ ಒಳಭಾಗದ ಗೋಡೆಗಳ ಮೇಲೆ ಕೇಸರಿ, ಬಿಳಿ, ಹಸಿರನ್ನು ಮೂಡಿಸುವ ಮೂಲಕ ಸೌಂದರ್ಯವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಕೆಲವೊಮ್ಮೆ ವಿವಿಧ ವರ್ಣದ ಬೆಳಕು ಗೋಡೆಗಳ ಮೇಲೆ ಬೀಳುವಂತೆ ಮಾಡಿ ವಿಶೇಷ ರಂಗನ್ನು ತುಂಬುತ್ತಿದೆ.

ನೀರನ್ನು ದಾರದ ಮಾದರಿಯಲ್ಲಿ ಮೇಲೆ ಚಿಮ್ಮುವಂತೆ ಮಾಡಿ ಮತ್ತೆ ನೀರಿನ ಮೇಲೆ ಬಿದ್ದಾಗ “ಸುಸ್ವಾಗತ, ವಂದನೆಗಳು ಎಂಬ ಅಕ್ಷರಗಳನ್ನು ಮೂಡಿಸುವ ಕಲೆಯೂ ಆಕರ್ಷಕವಾಗಿದೆ. ಲೇಸರ್‌ಲೈಟ್‌ ಸೊಬಗಿನಲ್ಲಿ ಅಲಂಕಾರಿಕ ವಿದ್ಯುತ್‌ದ್ದೀಪಗಳ ಬೆಳಕಿನೊಳಗೆ ಅಣೆಕಟ್ಟು ಹಾಗೂ ಬೃಂದಾವನ ನಯನಮನೋಹರವಾಗಿ ಸೆಳೆಯುತ್ತಿದೆ.

ಹತ್ತು ದಿನ ಅವಕಾಶ: ಬೃಂದಾವನ ಮತ್ತು ಅಣೆಕಟ್ಟೆಯ ಮೇಲೆ ಬೀಳುವ ಲೇಸರ್‌ ಲೈಟ್‌ ಹಾಗೂ ವಿದ್ಯುದ್ದೀಪಗಳ ಸೊಬಗು ದಸರಾ ಸಮಯಕ್ಕಷ್ಟೇ ಸೀಮಿತ. ದಸರಾ ವೇಳೆ ಹತ್ತು ದಿನಗಳ ಕಾಲ ಪ್ರವಾಸಿಗರನ್ನು ಸೆಳೆಯಲು ಧ್ವನಿ-ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಈ ಮಾದರಿಯ ಬೆಳಕಿನ ವ್ಯವಸ್ಥೆ ಮಾಡಿದರೆ ನಿರ್ವಹಣೆ ವೆಚ್ಚ ಅಧಿಕವಾಗುತ್ತದೆ. ದೀಪಗಳು ಬೇಗ ಹಾಳಾಗುವುದರಿಂದ ದಸರಾ ಸಮಯದಲ್ಲಷ್ಟೇ ಹೈ-ಬೀಮ್‌, ಫೋಕಸಿಂಗ್‌ ಹಾಗೂ ರೇ-ಲೇಸರ್‌ ಲೈಟ್‌ ಬೆಳಕಿನ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಕೆಆರ್‌ಎಸ್‌ ಜಲಾಶಯದ ಅಧಿಕಾರಿಗಳು.

Advertisement

ನೀರಿನ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ
ಪ್ರವಾಸಿಗರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಸಲುವಾಗಿ ಬೃಂದಾವನದ ಬೋಟಿಂಗ್‌ ಕಾರಂಜಿಯ ಬಳಿ ನೀರಿನ ಮೇಲೆ
ತೇಲುವ ವೇದಿಕೆ ನಿರ್ಮಿಸಲಾಗಿದೆ. ಅದರ ಮೇಲೆ ಕಲಾವಿದರು ಜನಪದ ಗೀತೆ, ಭಕ್ತಿ ಗೀತೆ, ಚಿತ್ರಗೀತೆ, ನೃತ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ವ್ಯವಸ್ಥೆ ಮಾಡಲಾಗಿದೆ.

6ರಿಂದ 9.30ರವರೆಗೆ ವೀಕ್ಷಣೆ: ಕೃಷ್ಣರಾಜಸಾಗರ ಜಲಾಶಯದಲ್ಲಿ ಮೂರು ತಾಸುಗಳ ಕಾಲ ಈ ಬೆಳಕಿನ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ 2ರವರೆಗೆ ಮಾತ್ರ ಈ ಬೆಳಕಿನ ವ್ಯವಸ್ಥೆ ಇರುತ್ತದೆ. 

ಕೆಆರ್‌ಎಸ್‌ ಬೃಂದಾವನವನ್ನು ಲೇಸರ್‌ ಮತ್ತು ವಿದ್ಯುದ್ದೀಪ ಗಳು ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಣೀಯವಾಗಿಸಿದೆ. ಇದಕ್ಕಾಗಿ 84 ಲಕ್ಷ ರೂ. ಖರ್ಚು ಮಾಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಅಣೆಕಟ್ಟೆಯ ಸೊಬಗನ್ನು ಹೆಚ್ಚಿಸುವುದು ಮೂಲ ಉದ್ದೇಶ. ಈ ಧ್ವನಿ-ಬೆಳಕಿನ ವ್ಯವಸ್ಥೆಯನ್ನು ದಸರಾ ಸಮಯಕ್ಕಷ್ಟೇ ಸೀಮಿತಗೊಳಿಸಲಾಗಿದೆ.
ಬಸವರಾಜೇಗೌಡ, ಕೆಆರ್‌ಎಸ್‌ ಕಾರ್ಯಪಾಲಕ ಅಭಿಯಂತರ

ದಸರಾ ಕವಿಗೋಷ್ಠಿಯಲ್ಲಿ ನೋಟ್‌ಬ್ಯಾನ್‌ ಸದ್ದು
ಮೈಸೂರು: ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿರುವ ದಸರಾ ಕವಿಗೋಷ್ಠಿಯ ಎರಡನೇ ದಿನವಾದ ಸೋಮವಾರ ವಿನೋದ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ನೋಟು ರದ್ಧತಿಯೂ ಸದ್ದು ಮಾಡಿತು. ಕಾವ್ಯವಾಚನ ಮಾಡಿದ ಡುಂಡಿರಾಜ್‌ “ಸ್ವಲ್ಪವೂ ಸುಳಿವು ನೀಡದೇ, 500-1000 ರೂ.ನೋಟು ರದ್ದು ಮಾಡಿದರು ಮೋದಿ, ಗುಟ್ಟು ರಟ್ಟಾಗದಿರಲೂ ಕಾರಣ ಅವರ ಮನೆಯಲ್ಲಿಲ್ಲ ಮಡದಿ’ ಎಂದು ಹಾಸ್ಯದ ಮೂಲಕ ರಂಜಿಸಿದರು. ವಿನೋದ ಕವಿಗೋಷ್ಠಿಯಲ್ಲಿ ಒಟ್ಟು ಮೂರು ಸುತ್ತಿನ ಕಾವ್ಯ ವಾಚನ ನಡೆಯಿತು. ಬಿ.ಆರ್‌.ಲಕ್ಷ್ಮಣ್‌ರಾವ್‌, ಡುಂಡಿರಾಜ್‌, ಭುವನೇಶ್ವರಿ ಹೆಗಡೆ, ಅಸಾದುಲ್ಲಾ ಬೇಗ್‌, ಎಂ.ಡಿ.ಗೋಗೇರಿ, ಸುಕನ್ಯಾ ಕಳಸ ಅವರು ಕವನ ವಾಚನ ಮಾಡಿದರು. 

2 ವರ್ಷದ ಬಳಿಕ ಪ್ರವಾಸಿಗರಿಗೆ ರತ್ನ ಖಚಿತ ಸಿಂಹಾಸನ ವೀಕ್ಷಣೆ ಭಾಗ್ಯ
ಮೈಸೂರು:
ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಎರಡು ವರ್ಷಗಳ ಬಳಿಕ ರತ್ನ ಖಚಿತ ಸಿಂಹಾಸನ ವೀಕ್ಷಣೆ ಭಾಗ್ಯ ದೊರೆತಿದೆ. ಇದಕ್ಕಾಗಿ ಮೈಸೂರು ಅರಮನೆ ಹಿಂಭಾಗದಲ್ಲಿರುವ ಒಡೆಯರ್‌ರ ಖಾಸಗಿ ಮ್ಯೂಸಿಯಂನ ಟಿಕೆಟ್‌ ಕೌಂಟರ್‌ನಲ್ಲಿ 50 ರೂ. ಪಾವತಿಸಿ ಟಿಕೆಟ್‌ ಖರೀದಿಸಿ ಸಿಂಹಾಸನ ನೋಡಬಹುದಾಗಿದೆ. ಸಿಂಹಾಸನ ವೀಕ್ಷಣೆಗೆ ಅವಕಾಶ  ಕೊಟ್ಟ ಬೆನ್ನಲ್ಲೇ ನೂರಾರು ಪ್ರವಾಸಿಗರು ಸಿಂಹಾಸನದ ಮುಂದೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದರಿಂದ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ. ಎರಡು ವರ್ಷಗಳ ಹಿಂದೆ ಸರ್ಕಾರ ಹೊಸದಾಗಿ ಅರಮನೆ ಮಂಡಳಿಗೆ ನಿರ್ದೇಶಕರ
ಹುದ್ದೆಯನ್ನು ಸೃಜಿಸಿ ಇಂದಿರಮ್ಮ ಅವರನ್ನು ನೇಮಿಸಿತ್ತು.  ಈ ಹುದ್ದೆ ಸೃಷ್ಟಿ ಅರಮನೆ ಮಂಡಳಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿತ್ತಲ್ಲದೆ, ಸಿಂಹಾಸನ ಜೋಡಣೆ ನಂತರ ಪ್ರಮೋದಾದೇವಿ ಒಡೆಯರ್‌ ಅವರು ಹೊದೆಸಿದ್ದ ಪರದೆಯನ್ನು ಅರಮನೆ ಮಂಡಳಿ ನಿರ್ದೇಶಕರು ಸರಿಸಿದ ಸಂಬಂಧ ಸಾಕಷ್ಟು ವಿವಾದ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next