ಬೆಂಗಳೂರು: ನಗರದಲ್ಲಿ ನಡೆದ 21ನೇ ಬೆಂಗಳೂರು ಟೆಕ್ ಸಮ್ಮಿಟ್‌ಗೆ ಶನಿವಾರ ಅರಮನೆ ಆವರಣದಲ್ಲಿ ಅದ್ದೂರಿ ತೆರೆಬಿದ್ದಿತು. ಮೂರು ದಿನಗಳ ಸಮಿಟ್‌ನಲ್ಲಿ ಸುಮಾರು ಹತ್ತು ಸಾವಿರ ಜನ ಭೇಟಿ ನೀಡಿದ್ದು, ದೇಶ-ವಿದೇಶಗಳಿಂದ 4,200 ಪ್ರತಿನಿಧಿಗಳು ಹಾಗೂ 350ಕ್ಕೂ ಹೆಚ್ಚು ತಜ್ಞರು ಇದರಲ್ಲಿ ಭಾಗವಹಿಸಿದ್ದರು.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಆವಿಷ್ಕಾರಗಳನ್ನು ಪರಿಚಯಿಸಲು ಇದು ವೇದಿಕೆಯಾಯಿತು. ಅಷ್ಟೇ ಅಲ್ಲ, ಹೊಸ ಹೊಸ ಆಲೋಚನೆಗಳು, ಆವಿಷ್ಕಾರಗಳ ವಿನಿಮಯ, ಸ್ಟಾರ್ಟ್‌ಅಪ್‌ಗ್ಳ ಆರಂಭಕ್ಕೆ ಈ ಮೇಳ ಕಾರಣವಾಯಿತು.
ಗ್ರಾಮೀಣ ಮತ್ತು ನಗರದ ಸಮಸ್ಯೆಗಳು, ಕೃಷಿ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನಗಳು ಒತ್ತುಕೊಟ್ಟಿದ್ದು ಈ ಬಾರಿಯ ವಿಶೇಷವಾಗಿತ್ತು. ವಿಚಾರ ಸಂಕಿರಣಗಳು ಕೂಡ ಇದೇ ವಿಷಯಗಳ ಮೇಲೆ ಬೆಳಕುಚೆಲ್ಲಿದವು. ದೇಶದ ಮೊದಲ ಡ್ರೋನ್ ಸ್ಪರ್ಧೆಗೂ ಈ ಸಮ್ಮಿಟ್ ಸಾಕ್ಷಿಯಾಯಿತು.
ಇತರೆ ನಗರಗಳಲ್ಲೂ ಕೈಗಾರಿಕೆ ಹಬ್: ಸಮ್ಮಿಟ್ ಕೊನೆಯ ದಿನ ಮಾತನಾಡಿದ ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎರಡನೇ ಹಂತದ ನಗರಗಳಲ್ಲೂ ಕೈಗಾರಿಕಾ ಕೇಂದ್ರಗಳನ್ನು ಸೃಷ್ಟಿಸಲು ಸರ್ಕಾರ ಉದ್ದೇಶಿಸಿದ್ದು, ಮುಂದಿನ 3-5 ವರ್ಷಗಳಲ್ಲಿ ಇದು ಸಾಕಾರಗೊಳ್ಳಲಿದೆ. ಇದಕ್ಕೆ ಪೂರಕವಾದ ನೀತಿ ರೂಪಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ, ತುಮಕೂರು, ಮಂಗಳೂರು, ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಣ ಹೂಡಿಕೆ ಮಾಡಿ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳಿಗೆ ಸರ್ಕಾರ ಜಾಗ, ವಿದ್ಯುತ್, ನೀರು ಸೇರಿದಂತೆ ಕೈಗಾರಿಕೆಗೆ ಅಗತ್ಯವಾದ ಸೌಲಭ್ಯ ಒದಗಿಸಲಿದೆ. ರಾಜ್ಯ ಕೈಗಾರಿಕೆಗಳ ನಿರ್ಮಾಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಬೆಳಗಾವಿಯಲ್ಲಿ ಏರೋಸ್ಪೇಸ್ ಉದ್ಯಮ ಆರಂಭಿಸಲಾಗುತ್ತಿದೆ.
ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆ ಮಾಡಲು ಟಿಸಿಎಸ್, ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಕಂಪನಿಗಳು ಮುಂದಾಗಿವೆ.
ಟೆಕ್ ಸಮ್ಮಿಟ್‌ನಲ್ಲಿ ಪಾಲ್ಗೊಂಡಿರುವ ಕಂಪನಿಗಳು ಕೂಡ ಹಣ ಹೂಡಿಕೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ ಎಂದು ಮಾಹಿತಿ ನೀಡಿದ ಅವರು, ಈ ಹಿಂದೆ ಕೈಗಾರಿಕೆಗಳೆಂದರೆ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್, ಬಿಇಎಲ್, ಬಿಇಎಂಎಲ್‌ನಂತಹ ಸಂಸ್ಥೆಗಳಿಗೆ ಸೀಮಿತವಾಗಿತ್ತು. ಈಗ ಖಾಸಗಿ ಕಂಪನಿಗಳು ಸರ್ಕಾರಿ ಒಡೆತನದ ಕಂಪನಿಗಳಿಗಿಂತ ಬೃಹತ್ ಕೈಗಾರಿಕೆ ಸ್ಥಾಪಿಸುತ್ತಿವೆ. ಸ್ಟಾರ್ಟ್‌ಅಪ್‌ಗ್ಳಲ್ಲಂತೂ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಶ್ಲಾ ಸಿದರು.