ಮುಂಬಯಿ, ಜು. 5: ರಾಜ್ಯದಲ್ಲಿ 2019 ಮತ್ತು 2018ನೇ ಸಾಲಿಗೆ ಹೋಲಿಸಿದರೆ 2020ರ ಮೊದಲ 5 ತಿಂಗಳುಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ತೀರಾ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜನವರಿಯಿಂದ ಮೇ ವರೆಗೆ 826 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಪ್ರಿಲ್‌ನಲ್ಲಿ 102 ಮಂದಿ ರೈತರು ಸಾವನ್ನಪ್ಪಿದ್ದು, ಇದು ಕಳೆದ ಐದು ವರ್ಷಗಳಲ್ಲೇ ಏಪ್ರಿಲ್‌ನಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯಾಗಿದೆ. 2020ರ ಮೊದಲ ಮೂರು ತಿಂಗಳಲ್ಲಿ ಕ್ರಮವಾಗಿ 198, 201, 168 ರೈತರ ಆತ್ಮಹತ್ಯೆ ಪ್ರಕರಣಗಳು ನಡೆದರೆ, ಮೇ ತಿಂಗಳಲ್ಲಿ 157 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018 ಮತ್ತು 2019ರಲ್ಲಿ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಕ್ರಮವಾಗಿ 1,117 ಮತ್ತು 1,085 ಆತ್ಮಹತ್ಯೆಗಳು ದಾಖಲಾಗಿವೆ. 2018 ಮತ್ತು 2019ರಲ್ಲಿ ಕ್ರಮವಾಗಿ 2,761 ಮತ್ತು 2,808 ರೈತ ಆತ್ಮಹತ್ಯೆಗಳು ವರದಿಯಾಗಿವೆ.
ವಿದರ್ಭ ಪ್ರಥಮ ಸ್ಥಾನ : ಈ ಐದು ತಿಂಗಳಲ್ಲಿ ಬಹುಪಾಲು ಆತ್ಮಹತ್ಯೆಗಳು 437 ವಿದರ್ಭದ 11 ಜಿಲ್ಲೆಗಳಲ್ಲಿ ವರದಿಯಾಗಿದ್ದು, ಅನಂತರದ ದಿನಗಳಲ್ಲಿ ಮರಾಠವಾಡ 273, ಪಶ್ಚಿಮ ಮತ್ತು ಉತ್ತರ ಮಹಾರಾಷ್ಟ್ರವು ಮೇ 31ರ ವರೆಗೆ ಕ್ರಮವಾಗಿ 12 ಮತ್ತು 104 ಪ್ರಕರಣಗಳನ್ನು ವರದಿ ಮಾಡಿದೆ. ಕೊರೊನಾ ಲಾಕ್‌ಡೌನ್ ಕಾರಣ ಮೂರು ತಿಂಗಳ ಅಂತರದ ಅನಂತರ ರಾಜ್ಯ ಸರಕಾರ ಆತ್ಮಹತ್ಯೆ ಡೇಟಾವನ್ನು ಬಿಡುಗಡೆ ಮಾಡಿದ್ದು, ಅಂಕಿಅಂಶಗಳನ್ನು ರಾಜ್ಯದ ಪರಿಹಾರ ಮತ್ತು ಪುನರ್ವಸತಿ ಇಲಾಖೆಯು ಸಂಗ್ರಹಿಸಿದೆ.
ಸಾಲ ಮನ್ನಾ ಪ್ರಕರಣಗಳ ಇಳಿಕೆಗೆ ಕಾರಣ : 30 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭವಾಗುವ ನಿರೀಕ್ಷೆಯಿರುವ ಸಾಲ ಮನ್ನಾವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಘೋಷಿಸಲಾಯಿತು. ಆ ಬಳಿಕದ ತಿಂಗಳುಗಳಲ್ಲಿ ಕಡಿಮೆ ಆತ್ಮಹತ್ಯೆಗಳು ವರದಿಯಾಗಿವೆ. ನವೆಂಬರ್ ಮತ್ತು ಡಿಸೆಂಬರ್ ಅನಂತರ ಕ್ರಮವಾಗಿ 308 ಮತ್ತು 242 ಆತ್ಮಹತ್ಯೆಗಳು ವರದಿಯಾಗಿವೆ ಎಂದು ಪರಿಹಾರ ಮತ್ತು ಪುನರ್ವಸತಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ ಕೊನೆಯ ವಾರದಲ್ಲಿ ವಿತರಣೆಯ ಪ್ರಾರಂಭದ ಅನಂತರ, ರಾಜ್ಯವು 19 ಲಕ್ಷ ರೈತರ ಖಾತೆಗಳಿಗೆ 12,000 ಕೋ. ರೂ. ಗಳನ್ನು ಜಮಾವಣೆಗೊಳಿಸಿದೆ. ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆದರೂ 11.12 ಲಕ್ಷಕ್ಕೂ ಹೆಚ್ಚು ರೈತರು 8,100 ಕೋಟಿ ರೂ. ಮೌಲ್ಯದ ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ.