Advertisement

ಜಾನುವಾರು ಸಂಖ್ಯೆಯಲ್ಲಿ ಭಾರೀ ಕುಸಿತ

03:48 PM Aug 30, 2017 | |

ಚಿತ್ರದುರ್ಗ: ಸತತ ಬರದಿಂದಾಗಿ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿರುವ ಕಳವಕಾರಿ ಅಂಶ ಪಶು ಸಂಗೋಪನಾ ಇಲಾಖೆ ನಡೆಸಿದ ಜಾನುವಾರು ಗಣತಿ ವರದಿಯಲ್ಲಿ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ಹಾಲು ನೀಡುವಂತಹ ಸೀಮೆ ಹಸುಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ ಎಂದು ವರದಿಯಲ್ಲಿ ಸೂಚಿಸಿರುವುದು ಸಮಾಧಾನದ ಅಂಶ.

Advertisement

ಈ ವರ್ಷ ನಡೆಸಿದ ಜಾನುವಾರುಗಳ ಗಣತಿಯಂತೆ ಜಿಲ್ಲೆಯಲ್ಲಿ 10.66 ಲಕ್ಷ ಜಾನುವಾರುಗಳಿವೆ. ಆದರೆ 2012ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 16 ಲಕ್ಷ ಜಾನುವಾರುಗಳಿದ್ದುವು. ಅದರಲ್ಲಿ ಈಗ 5.33 ಲಕ್ಷದಷ್ಟು ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದ್ದು ರೈತರು ಪಶುಪಾಲನೆಯಿಂದ ವಿಮುಖರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. 5 ಲಕ್ಷ ಜಾನುವಾರು ಕಡಿಮೆ: 2017ರ ಗಣತಿ ಪ್ರಕಾರ ಜಾನುವಾರುಗಳ ಅಂಕಿ ಅಂಶಗಳ ಪ್ರಕಾರ ದನ, ಎಮ್ಮೆ, ಕುರಿ ಮತ್ತು ಮೇಕೆಗಳ ಸಂಖ್ಯೆ 10,66,252 ಇದೆ. 2012ರಲ್ಲಿ 16,00,058 ಜಾನುವಾರುಗಳಿದ್ದವು. ಅಂದರೆ 5,33,806 
ಜಾನುವಾರುಗಳು ಕಡಿಮೆಯಾಗಿವೆ. ಕೇವಲ ಐದು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು ಆತಂಕದ ಸಂಗತಿ.  ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ 10 ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ವಿರಳವಾಗುವ ಸಾಧ್ಯತೆಯನ್ನು
ತಳ್ಳಿಹಾಕುವಂತಿಲ್ಲ. 

2017ರ ಗಣತಿ ಪ್ರಕಾರ 2,25,916 ಆಕಳುಗಳಿವೆ. 2012ರ ಗಣತಿಯಂತೆ 2,75,889 ಆಕಳುಗಳಿದ್ದವು. ಈಗ ಅವುಗಳ ಸಂಖ್ಯೆ 49,973ಕ್ಕೆ ಕುಸಿದಿದೆ. ಕಳೆದ ಬಾರಿ ಇದ್ದ 1,52,852 ಎಮ್ಮೆಗಳ ಸಂಖ್ಯೆ ಈ ಬಾರಿ 1,09, 928 ಆಗಿ 42,924 ಎಮ್ಮೆಗಳು ಕಡಿಮೆಯಾಗಿವೆ. ಹಿಂದೆ ಇದ್ದ 9,40,038 ಕುರಿಗಳ ಸಂಖ್ಯೆ ಈಗ 8,22,399 ಆಗಿದೆ. ಅಂದರೆ 1,17,639 ಕುರಿಗಳು ಕಡಿಮೆಯಾಗಿವೆ. 2,31,279 ಮೇಕೆಗಳ ಪೈಕಿ 2,07,736 ಉಳಿದಿದ್ದು, 23,543 ಮೇಕೆಗಳು ಕಡಿಮೆಯಾಗಿವೆ.

ರೈತರಿಗೆ ಸಂಕಷ್ಟ: ರೈತರು ಕೃಷಿ ಚಟುವಟಿಕೆ ಜೊತೆಗೆ ಪಶುಪಾಲನೆ ಮತ್ತು ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡು ಬರುತ್ತಿದ್ದರು. ಕೃಷಿಯಲ್ಲಿನ ನಷ್ಟವನ್ನು ಹೈನುಗಾರಿಕೆ, ಪಶುಪಾಲನೆಯಲ್ಲಿ ತುಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಜಾನುವಾರುಗಳ  ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ರೈತರಿಗೂ ಸಂಕಷ್ಟ ಬಂದೊದಗಿದೆ. ಮುಂದಿನ ಪೀಳಿಗೆಗೆ ಎಮ್ಮೆ, ದನ, ಕುರಿ, ಮೇಕೆ ಈ ರೀತಿ ಇದ್ದವು ಎನ್ನುವುದನ್ನು ಚಿತ್ರಗಳ ಮೂಲಕ ತೋರಿಸುವ ಕಾಲ ದೂರವಿಲ್ಲ. ಇಡೀ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಕುರಿ, ಮೇಕೆ, ಆಕಳು, ಎಮ್ಮೆಗಳ
ಸಾಕಾಣಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ಎಂಥಹ ಸಂದರ್ಭದಲ್ಲೂ ರೈತರು ಜಾನುವಾರು ಸಾಕಾಣಿಕೆಯಿಂದ ವಿಮುಖರಾಗಿರಲಿಲ್ಲ. ಕಳೆದ ಮಾರ್ಚ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿನ ಜಾನುವಾರುಗಳ ಸಮೀಕ್ಷೆ ನಡೆಸಲಾಗಿದೆ.  ಅದರ ಪ್ರಕಾರ ಕುರಿ ಮತ್ತು ಮೇಕೆ ಹೊರತುಪಡಿಸಿ 3,35,844
ಜಾನುವಾರುಗಳು ಜಿಲ್ಲೆಯಲ್ಲಿವೆ. ಇದರಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ 68,829, ಚಳ್ಳಕೆರೆ 68,951, ಮೊಳಕಾಲ್ಮೂರು 32,801, ಹಿರಿಯೂರು 34,482, ಹೊಸದುರ್ಗ 69,319 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 61,423 ಜಾನುವಾರುಗಳಿವೆ. ಈ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ
ಹೈನುಗಾರಿಕೆ ಮತ್ತು ಪಶುಪಾಲನೆ ಬಗ್ಗೆ ರೈತರು ನಿರಾಸಕ್ತಿ ತಾಳುತ್ತಿದ್ದಾರೆ. 

ಜಾನುವಾರುಗಳಿಗೆ ಕಾಡುತ್ತಿರುವ ರೋಗಗಳು, ಬರ, ಮೇವು ಮತ್ತು ನೀರಿನ ಕೊರತೆ, ನಿರ್ವಹಣೆ ದುಬಾರಿ ಆಗುತ್ತಿರುವುದು ಜಾನುವಾರುಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ. 

Advertisement

ಐದು ವರ್ಷಗಳ ಅವಧಿಯಲ್ಲಿ ನಾನಾ ಕಾರಣಗಳಿಂದ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು ಆತಂಕದ ವಿಚಾರ. ಜಾನುವಾರುಗಳ ಹೆಚ್ಚಳ ಮತ್ತು ರಕ್ಷಣೆಗೆ ಹೆಚ್ಚಿನ ಗಮನ ನೀಡುವಂತೆ ಪಶುವೈದ್ಯರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಗೋಶಾಲೆ ತೆರೆದು ಜಾನುವಾರುಗಳ ರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. 
ಎಚ್‌. ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವರು

ಹರಿಯಬ್ಬೆ ಹೆಂಜಾರಪ್ಪ 

Advertisement

Udayavani is now on Telegram. Click here to join our channel and stay updated with the latest news.

Next