Advertisement

ಅವಸಾನದತ್ತ ಬೃಹತ್‌ ಕೆರೆ

11:23 AM Jun 30, 2019 | Team Udayavani |

ಗಜೇಂದ್ರಗಡ: ಬೆಟ್ಟದಿಂದ ಹರಿದು ಪೋಲಾಗುವ ಮಳೆ ನೀರನ್ನು ತಡೆಹಿಡಿಯುವ ಉದ್ದೇಶದಿಂದ ನಿರ್ಮಿಸಿದ ಬೃಹತ್‌ ಕೆರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಸಾನದತ್ತ ಸಾಗುತ್ತಿದೆ. ಕೆರೆಯ ತುಂಬೆಲ್ಲ ಜಾಲಿ ಕಂಟಿಗಳು ಬೆಳೆದು ಕಾಲಗರ್ಭ ಸೇರುವ ಹಂತ ತಲುಪಿದೆ.

Advertisement

ಪಟ್ಟಣದ ಗುಡ್ಡದ ಕೆಳ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 2012ರಲ್ಲಿ 6 ಕೋಟಿಗೂ ಅಧಿಕ ವೆಚ್ಚದಲ್ಲಿ 37 ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಿಸಲಾಗಿದೆ. ಮಳೆಗಾಲ ಸಂದರ್ಭದಲ್ಲಿ ಬೆಟ್ಟದಿಂದ ರಭಸವಾಗಿ ಹರಿದು ಬರುವ ಮಳೆ ನೀರು ವಾಜಪೇಯಿ ಬಡಾವಣೆ, ಶಿವಾಜಿ ಪೇಟೆ, ಅಡೇಕಾರ ಗಲ್ಲಿ, ಹಿರೇಬಜಾರ, ನೇಕಾರ ಕಾಲೋನಿ, ಜನತಾ ಪ್ಲಾಟ್, ಜಿ.ಎಸ್‌. ಪಾಟೀಲ ನಗರ ಹಾಗೂ ಉಣಚಗೇರಿ ಭಾಗದಲ್ಲಿ ವಾಸಿಸುವ ಕುಟುಂಬಗಳ ಮನೆಗಳಿಗೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿ ತೀವ್ರ ತೊಂದರೆಯನ್ನುಂಟು ಮಾಡುತ್ತಿರುವುದನ್ನು ತಪ್ಪಿಸಿ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರಕಾರ ಕೆರೆ ನಿರ್ಮಿಸಿದೆ. ಆದರೆ ಕೆರೆಗೆ ಸೂಕ್ತ ನಿರ್ವಹಣೆ ಇಲ್ಲದೇ ಕೆರೆಯ ಚಿತ್ರಣವೇ ಸಂಪೂರ್ಣ ಬದಲಾಗಿದೆ.

ಕೃಷಿ ಚಟುವಟಿಕೆಗೆ ಹಿನ್ನಡೆ: ಮಳೆಗಾಲದಲ್ಲಿ ಗುಡ್ಡದಿಂದ ರಭಸವಾಗಿ ಹರಿಯುವ ಮಳೆ ನೀರು ಸಂಪೂರ್ಣ ಕೆರೆ ಮಧ್ಯಭಾಗದಲ್ಲಿ ಸಂಗ್ರಹವಾಗುತ್ತಿತ್ತು. ಇದು ಕೃಷಿ ಚಟುವಟಿಕೆ ಹೇಳಿ ಮಾಡಿಸಿದ ತಾಣವಾಗಿತ್ತು. ಅಲ್ಲದೇ ಬರಗಾಲದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವ ಭಗೀರಥದಂತಿತ್ತು. ಆದರೀಗ ಕೆಲವರು ಸ್ವಾರ್ಥಕ್ಕಾಗಿ ಕೆರೆಯನ್ನು ದುರುಪಯೋಗ ಪಡಿಸಿಕೊಂಡಿರುವುದು ಕೃಷಿ ಚಟುವಟಿಕೆಗೆ ಹಿನ್ನಡೆಯಾದಂತಾಗಿದೆ.

ಕೆರೆಯೋ-ಗುಂಡಿಯೋ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಈ ಬೃಹತ್‌ ಕೆರೆಯಲ್ಲಿ ಮಳೆ ನೀರು ಒಂದೆಡೆ ಸಂಗ್ರಹವಾಗುತ್ತಿಲ್ಲ. ಕೆರೆ ತುಂಬೆಲ್ಲ ಅಕ್ರಮಕೋರರು ಅಗೆದ ಹತ್ತಾರು ಅಡಿ ಆಳದ ಗುಂಡಿಗಳಲ್ಲಿ ನೀರು ನಿಂತು ಉಪಯೋಗಕ್ಕೆ ಬಾರದೇ ಹಾಳಾಗುತ್ತಿರುವುದರಿಂದ ರೈತರ ಪಾಲಿಗೆ ಕೆರೆ ಇದ್ದು ಇಲ್ಲದಂತಾಗಿದೆ.

ಕೆರೆ ಉಳಿವಿಗೆ ಅಭಿಯಾನ: ಗಜೇಂದ್ರಗಡದಲ್ಲಿ ದಶಮಾನಗಳಿಂದಲೂ ಜಲ ಮೂಲಗಳನ್ನು ಕಂಡೆ ಇಲ್ಲ. ಆದರೆ 2012ರಲ್ಲಿ ನಿರ್ಮಾಣವಾಗಿರುವ ಬೃಹತ್‌ ಇಂಗು ಕೆರೆ ಉಳಿಸುವ ದಿಸೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದಾಗಿ ಅಧಿಕಾರಿಗಳನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ಉಳಿವಿಗೆ ಅಭಿಯಾನ ನಡೆಸಲು ಮುಂದಾದಲ್ಲಿ ಮಾತ್ರ ಕೆರೆಯು ಪುನರುಜ್ಜೀವನ ಆಗಲು ಸಾಧ್ಯ ಎನ್ನುತ್ತಾರೆ ಕೆಲ ಪ್ರಜ್ಞಾವಂತರು.

Advertisement

 

•ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next