Advertisement

ಲ್ಯಾಪ್‌ಟಾಪ್‌ ಹಗರಣ : ಸಚಿವ ರಾಯರೆಡ್ಡಿ ರಾಜೀನಾಮೆಗೆ ಬಿಎಸ್‌ವೈ ಪಟ್ಟು

10:36 AM Nov 16, 2017 | Team Udayavani |

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ನೆಪದಲ್ಲಿ ನಡೆದಿರುವ ಅಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯೇ ಹೊಣೆಗಾರರಾಗಿದ್ದು, 300 ಕೋಟಿ ರೂ.ಲೂಟಿ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ನೈತಿಕ ಹೊಣೆ ಹೊತ್ತು ಬಸವರಾಜ ರಾಯರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

Advertisement

ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಖರೀದಿಸಲು ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ಆಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅಜಯ್‌ ನಾಗಭೂಷಣ್‌ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅಕ್ರಮದ ವಿರುದ್ಧ ಧ್ವನಿ ಎತ್ತಿದ ಆಯುಕ್ತರಿಗೆ ಸರ್ಕಾರದಿಂದ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಲ್ಯಾಪ್‌ಟಾಪ್‌ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರೇ ನೇರವಾಗಿ ಭಾಗಿಯಾಗಿದ್ದಾರೆ. ತಕ್ಷಣವೇ ಅವರು ರಾಜೀನಾಮೆ ನೀಡಬೇಕು ಎಂದು ಬುಧವಾರ ಸದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

2016-17ರಲ್ಲಿ  ಲ್ಯಾಪ್‌ಟಾಪ್‌ ಒಂದಕ್ಕೆ 14,692 ರೂ. ಟೆಂಡರ್‌ ಕರೆಯಲಾಗಿತ್ತು. 2017-18ರಲ್ಲಿ 24692 ರೂ.ಗಳ ಟೆಂಡರ್‌ ಕರೆದಿದ್ದಾರೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪ ಆಗಿದೆ. ಒಂದೊಂದು ಲ್ಯಾಪ್‌ಟಾಪ್‌ ಮೇಲೆ 10 ಸಾವಿರ ರೂ. ಹೆಚ್ಚುವರಿಯಾಗಿ ಪಡೆದಿದ್ದಾರೆ ಎಂದು ಇಲಾಖೆ ಆಯುಕ್ತರೇ ಪತ್ರದಲ್ಲಿ ತಿಳಿಸಿದ್ದರು. ಸರ್ಕಾರದ ಬೊಕ್ಕಸದಿಂದ ಹಣ ಲೂಟಿ ಆಗುತ್ತಿರುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕೆ?. ನಿಷ್ಠೆಯಿಂದ ಸೇವೆ ಸಲ್ಲಿಸುವ ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ಮತ್ತು ಶಿಕ್ಷೆ ನೀಡುವುದು ಸಾಮಾನ್ಯವಾಗಿದೆ ಎಂದರು.

ರಾಜ್ಯದಲ್ಲಿ ಇನ್ನು ಮೂರೇ ತಿಂಗಳು ಕಾಂಗ್ರೆಸ್‌ ಸರ್ಕಾರ ಇರುವುದು ಎಂಬುದುನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರಿವಿಗೆ  ಬಂದಿದೆ. ಹೀಗಾಗಿ ಎಲ್ಲಾ ಸಚಿವರು ಎಷ್ಟು ದೋಚಲು ಸಾಧ್ಯವು ಅಷ್ಟು ದೋಚುತ್ತಿದ್ದಾರೆ. ಲ್ಯಾಪ್‌ಟಾಪ್‌ ಹಗರಣವನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ನೇಮಕಾತಿ ಯಾವಾಗ?
2018ರಲ್ಲಿ 1.50 ಲಕ್ಷ ಸರ್ಕಾರಿ ನೌಕರರು ನಿವೃತ್ತರಾಗುತ್ತಿದ್ದಾರೆ. ಹೊಸ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸರ್ಕಾರ ಉದ್ಯೋಗದಲ್ಲಿ ಶೇ.25 ಹುದ್ದೆ ಖಾಲಿ ಉಳಿಯಲಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

Advertisement

ಅಂಬೇಡ್ಕರ್‌ ಸೂಲ್ಕ್ ಆಫ್ ಎಕನಾಮಿಕ್ಸÕಗೆ 150 ಕೋಟಿ ರೂ. ನೀಡಲು ಜಿಂದಾಲ್‌ ಸಂಸ್ಥೆ ಮುಂದೆ ಬಂದಿತ್ತು. ರಾಜ್ಯ ಸರ್ಕಾರ ಇದನ್ನು ತಿರಸ್ಕರಿಸಿ ರಹಸ್ಯ ಸಭೆ ಮಾಡಿ, 90 ಕೋಟಿ ರೂ. ಅಂದಾಜಿನ ಯೋಜನೆಯನ್ನು 190 ಕೋಟಿರೂ.ಗಳಿಗೆ ಏರಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ವಿರೋಧದ ನಡುವೆಯೇ ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು.

ಜಿಎಸ್‌ಟಿ ಅನುಷ್ಠಾನದ ನಂತರ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಲಾಗಿದೆ. ರಾಜ್ಯದ ಹಲವು ಚೆಕ್‌ಪೋಸ್ಟ್‌ಗಳಲ್ಲಿ ವಸೂಲಿ ಇಂದಿಗೂ ನಿಂತಿಲ್ಲ. ಝಳಕಿ ಹಾಗೂ ಹುಮ್ನಾಬಾದ್‌ ಮೊದಲಾದ ಚೆಕ್‌ಪೋಸ್ಟ್‌ಗಳಲ್ಲಿ ಆರ್‌ಟಿಒ ಅಧಿಕಾರಿಗಳು ಇಂದಿಗೂ ಹಣ ವಸೂಲಿ ಮಾಡುತ್ತಲೇ ಇದ್ದಾರೆ ಎಂದು ದೂರಿದರು.

ಬಿಜೆಪಿ ಮುಖಂಡರಾದ ಸಿ.ಎಂ.ಉದಾಸಿ, ರವಿ ಕುಮಾರ್‌, ಗೋ.ಮಧುಸೂಧನ್‌, ಡಾ.ವಾಮನಾಚಾರ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.

ಸತ್ಯ ಹೊರ ಬರುತ್ತದೆ :
ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣವನ್ನು ಸಿಐಡಿ ಪೊಲೀಸರು ಗಂಭೀರವಾಗಿ ತನಿಖೆ ಮಾಡಿಲ್ಲ ಎನ್ನುವುದಕ್ಕೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿರುವ ಬುಲೆಟ್‌ ತುಣುಕುಗಳೇ ಇದಕ್ಕೆ ಸಾಕ್ಷಿ. ಸಚಿವ ಕೆ.ಜೆ.ಜಾರ್ಜ್‌ ಅವರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಗಣಪತಿಯವರ ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿದ್ದ ಮಾಹಿತಿ ಡಿಲೀಟ್‌ ಮಾಡಿದ್ದಾರೆ. ಸಚಿವ ಜಾರ್ಜ್‌ ನಿರಪರಾಧಿ ಎಂದು ಸಾಬೀತು ಮಾಡುವ ಉದ್ದೇಶದಿಂದ ಸಿಐಡಿ ಅಧಿಕಾರಿಗಳು ಮೊಬೈಲ್‌, ಸಿಸಿಟೀವಿ, ವಿಧಿವಿಜ್ಞಾನ ವರದಿ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಈಗ ಸಿಬಿಐ ತನಿಖೆಯಿಂದ ಸತ್ಯ ಹೊರ ಬರುತ್ತಿದೆ ಎಂದು ಬಿಎಸ್‌ವೈ ಹೇಳಿದರು.

ಭ್ರಷ್ಟ ಸಿಎಂ, ಅತ್ಯಾಚಾರಿ ಉಸ್ತುವಾರಿ
ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ವೇಣುಗೋಪಾಲ್‌ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಈ ವಿಷಯವನ್ನು ಲೋಕಸಭೆಯಲ್ಲೂ ಮಂಡನೆ ಮಾಡಲಿದ್ದೇವೆ. ರಾಜ್ಯದಲ್ಲಿ ಭ್ರಷ್ಟ ಮುಖ್ಯಮಂತ್ರಿ ಹಾಗೂ ಅತ್ಯಾಚಾರಿ ಉಸ್ತುವಾರಿ ಸೇರಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಎಸ್‌ವೈ ಆರೋಪಿಸಿದರು.

ತುಮಕೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ 29 ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಭಾರೀ ಯಶಸ್ವಿಯಾಗಿದೆ. ಪರಿವರ್ತನಾ ಯಾತ್ರೆ ಭವಿಷ್ಯದ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಲಿದೆ. ಗುರುವಾರ ಬೆಳಗಾವಿಗೆ ಯಾತ್ರೆ ಪ್ರವೇಶಿಸಲಿದೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next