Advertisement

ಆರ್ಥಿಕ ಹೊರೆ ಇಳಿಸಲು ಉಚಿತ ಲ್ಯಾಪ್‌ಟಾಪ್‌ ಯೋಜನೆ ರದ್ದುಗೊಳಿಸಲು ಮುಂದಾದ ರಾಜ್ಯ ಸರ್ಕಾರ

10:16 AM Feb 10, 2020 | sudhir |

ಬೆಂಗಳೂರು :ಕಾಲೇಜು ಶಿಕ್ಷಣ ಇಲಾಖೆಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸುವ ಯೋಜನೆಯನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರಲ್ಲಿ ಉಚಿತ ಲ್ಯಾಪ್‌ಟಾಪ್‌ ನೀಡುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆಯನ್ನು ಮುಂದುವರಿಸಲಾಯಿತಾದರೂ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಹಂಚಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಸರ್ಕಾರಿ ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಹಂಚಿಕೆ ಮಾಡಲಾಗಿತ್ತು.

ಬಿಜೆಪಿ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಕಾಲೇಜಿನ ಅರ್ಹ 1.5 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ತೀರ್ಮಾನ ತೆಗೆದುಕೊಂಡು, ಸಾಂಕೇತಿಕವಾಗಿ ಲ್ಯಾಪ್‌ಟಾಪ್‌ ವಿತರಣೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಂಚಿಕೆಗೆ ಎಲ್ಲ ರೀತಿಯ ಸಿದ್ದತೆ ಪೂರ್ಣಗೊಂಡಿದೆ.

ಆದರೆ, 2020-21ನೇ ಸಾಲಿನಿಂದ ಉಚಿತ ಲ್ಯಾಪ್‌ಟಾಪ್‌ ನೀಡಲು ಅನುದಾನದ ಕೊರತೆ ಇರುವುದರಿಂದ ಶಾಶ್ವತವಾಗಿ ಈ ಯೋಜನೆಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

2016-17ನೇ ಸಾಲಿನಲ್ಲಿ ಯೋಜನೆ ಘೋಷಣೆಯಾಗಿದ್ದರೂ, 2017-18, 2018-19ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ( ಈಗ ದ್ವಿತೀಯ ಹಾಗೂ ತೃತೀಯ ಪದವಿ) ಲ್ಯಾಪ್‌ಟಾಪ್‌ ಸಿಕ್ಕಿಲ್ಲ(ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಹೊರತುಪಡಿಸಿ) 2019-20ನೇ ಸಾಲಿನಲ್ಲಿ ಪ್ರಥಮ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗ ಲ್ಯಾಪ್‌ಟಾಪ್‌ ವಿತರಣಾ ಕಾರ್ಯ ಆರಂಭವಾಗಲಿದೆ.

Advertisement

ಟೆಂಡರ್‌ ಹಾಗೂ ಲ್ಯಾಪ್‌ಟಾಪ್‌ ಪೂರಕೆ ಕಾರ್ಯ ಪೂರ್ಣಗೊಂಡಿದೆ. ಇ-ಕಂಟೆಂಟ್‌ ತುಂಬಿರುವ ಲ್ಯಾಪ್‌ಟಾಪ್‌ ನೀಡಬೇಕಿರುವುದರಿಂದ ವರ್ಷದಿಂದ ವರ್ಷಕ್ಕೆ ಲ್ಯಾಪ್‌ಟಾಪ್‌ ದರವೂ ಹೆಚ್ಚಳವಾಗುತ್ತಿರುತ್ತದೆ. ಅಲ್ಲದೆ, ಯೋಜನೆ ಘೋಷಣೆಯಾದ ವರ್ಷದಲ್ಲಿ ಒಂದು ಲ್ಯಾಪ್‌ಟಾಪ್‌ಗೆ ಕನಿಷ್ಠ 14500 ರೂ. ಇತ್ತು. ಈಗದ ಬೆಲೆ ದ್ವಿಗುಣವಾಗಿದೆ. ಹೀಗಾಗಿ ದುಬಾರಿ ವೆಚ್ಚವನ್ನು ಇಲಾಖೆ ಭರೀಸಬೇಕಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಯೋಜನೆಯನ್ನೇ ರದ್ದು ಮಾಡುವ ಬಗ್ಗೆ ಚರ್ಚೆ ನಡೆಸಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next