Advertisement

ಲ್ಯಾನ್ಸ್‌ಡೌನ್‌ ಬಿಲ್ಡಿಂಗ್‌, ದೇವರಾಜ ಮಾರುಕಟ್ಟೆ ನೆಲಸಮಕ್ಕೆ ನಿರ್ಣಯ

07:30 AM Jan 30, 2019 | Team Udayavani |

ಮೈಸೂರು: ಶತಮಾನಗಳ ಇತಿಹಾಸ ಹೊಂದಿರುವ ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್‌ ಬಿಲ್ಡಿಂಗ್‌ ಮತ್ತು ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ, ಪುನರ್‌ ನಿರ್ಮಾಣ ಮಾಡಲು ತೀರ್ಮಾನಿಸಿರುವ ನಗರ ಪಾಲಿಕೆ, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದೆ.

Advertisement

ಮೇಯರ್‌ ಪುಷ್ಪಲತಾ ಜಗನ್ನಾಥ್‌ ಅಧ್ಯಕ್ಷತೆ ಯಲ್ಲಿ ಬುಧವಾರ ನಡೆದ ನಗರಪಾಲಿಕೆಯ ಸಾಮಾನ್ಯ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸದಸ್ಯರು, ಈ ಎರಡೂ ಪಾರಂಪರಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಟಾಸ್ಕ್ ಫೋರ್ಸ್‌ನ ತೀರ್ಮಾನದಂತೆ ಲ್ಯಾನ್ಸ್‌ ಡೌನ್‌ ಬಿಲ್ಡಿಂಗ್‌ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸಿ ಮರು ನಿರ್ಮಾಣ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಯಿತು.

ಮಾಜಿ ಮೇಯರ್‌ ಅಯೂಬ್‌ ಖಾನ್‌ ನಗರ ಪಾಲಿಕೆ 1ನೇ ವಲಯ ಸಹಾಯಕ ಆಯುಕ್ತರ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಸ್ವಚ್ಛ ಭಾರತ ಸರ್ವೇಕ್ಷಣೆ ನಡೆಯುತ್ತಿದೆ. ಅರಮನೆಯು ನಗರದ ಹೃದಯ ಭಾಗದಲ್ಲಿದ್ದು, ಅಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಅರಮನೆಯ ಸುತ್ತಲೂ ಫ‌ುಟ್ಪಾತ್‌ ಮೇಲೆ ವ್ಯಾಪಾರ ಮಾಡುವವರನ್ನು ಯಾಕೆ ತೆರವುಗೊಳಿಸಿಲ್ಲ ಎಂದು ಪ್ರಶ್ನಿಸಿದರು.

ಈ ಬಗ್ಗೆ ಸಹಾಯಕ ಆಯುಕ್ತ ಸುನಿಲ್‌ ಬಾಬು ನೀಡಿದ ಸಮಜಾಯಿಷಿಯನ್ನು ಒಪ್ಪದ ಅಯೂಬ್‌ ಖಾನ್‌, ವಲಯ ಕಚೇರಿ 1ರ ಸಹಾಯಕ ಆಯುಕ್ತರನ್ನು ನಗರ ಪಾಲಿಕೆ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಮಾತೃ ಸಂಸ್ಥೆಗೆ ಕಳುಹಿಸಿಕೊಡಬೇಕು. ಅವರನ್ನು ಕರೆಸಿ ನಡೆದಿರುವ ಲೋಪದ ಕುರಿತು ವಿವರಣೆ ಕೊಡಿಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ದನಿಗೂಡಿಸಿದ ಮ.ವಿ.ರಾಮಪ್ರಸಾದ್‌, ಜಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯ ಇಕ್ಕೆಲಗಳಲ್ಲಿ ರಾತ್ರೋ ರಾತ್ರಿ ಅನೇಕ ಅಂಗಡಿಗಳು ತಲೆ ಎತ್ತುತ್ತಿವೆ. ಕೆಲವು ವ್ಯಕ್ತಿಗಳು ಮತ್ತು ಇಲಾಖೆಗಳು ಇದನ್ನು ದಂಧೆ ಮಾಡಿಕೊಂಡಿದ್ದಾರೆ. ಇಂತಿಷ್ಟು ರಸ್ತೆ ಎಂದು ಹಂಚಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

Advertisement

ಸುಬ್ಬಯ್ಯ, ಡಾ. ಅಶ್ವಿ‌ನಿ ಶರತ್‌ ಕೂಡ ದನಿಗೂಡಿ ಸಿದರು. ಈ ವೇಳೆ ಮೇಯರ್‌ ಪುಷ್ಪಲತಾ ಜಗ ನ್ನಾಥ್‌ ಅವರು, ವಲಯ ಸಹಾಯಕ ಆಯುಕ್ತ ಸುನಿಲ್‌ ಬಾಬು ಮತ್ತು ಆರೋಗ್ಯಾಧಿಕಾರಿ ಡಾ. ನಾಗರಾಜ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸುವುದಾಗಿ ರೂಲಿಂಗ್‌ ನೀಡಿದರು.

ಸಿದ್ಧಗಂಗಾ ಶ್ರೀಗೆ ಸಂತಾಪ: ಸಿದ್ಧಗಂಗಾ ಶ್ರೀಗಳಿಗೆ ನಗರಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸದಸ್ಯರು ಶ್ರೀಗಳಿಗೆ ಭಾರತ ರತ್ನ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸುವಂತೆ ಆಗ್ರಹಿಸಿದರು. ಕೆಲವರು ಕುವೆಂಪುನಗರದಲ್ಲಿನ ಶಿವಕುಮಾರ ಸ್ವಾಮೀಜಿ ವೃತ್ತವನ್ನು ಅಭಿವೃದ್ಧಿಪಡಿಸಬೇಕು ಎಂದರೆ, ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್‌, ನಗರ ಪಾಲಿಕೆಯ ಹಳೇ ಕೌನ್ಸಿಲ್‌ ಸಭಾಂಗಣಕ್ಕೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡುವಂತೆ ಕೋರಿದರು. ಉಪ ಮೇಯರ್‌ ಶಫೀ ಅಹಮದ್‌, ಆಯುಕ್ತ ಕೆ.ಎಚ್.ಜಗದೀಶ್‌ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next