ಮಂಡ್ಯ: ರಕ್ತ ಎಂದರೆ ಮನುಷ್ಯನ ದೇಹಕ್ಕೆ ಸಂಜೀವಿನಿ ಇದ್ದಂತೆ. ಅಪಘಾತ, ಗರ್ಭೀಣಿಯರಿಗೆ, ಶಸ್ತ್ರಚಿಕಿತ್ಸೆ ಸೇರಿ ರೋಗಿಗಳಿಗೆ ವಿವಿಧ ಸಂದರ್ಭದಲ್ಲಿ ರಕ್ತ ಅವಶ್ಯಕ. ಅದರಂತೆ ರಕ್ತದಾನಿಗಳೂ ಪ್ರಮುಖರಾಗಿದ್ದಾರೆ. ಅವರಿಗೆಂದೇ ಜೂ.14ರಂದು ವಿಶ್ವರಕ್ತದಾನಿಗಳ ದಿನ ಆಚರಣೆ ಮಾಡಲಾಗುತ್ತಿದೆ.
60ನೇ ಬಾರಿ ರಕ್ತದಾನ: ನೆಲದನಿ ಬಳಗ ಸಂಘಟನೆ ಅಧ್ಯಕ್ಷ ಲಂಕೇಶ್‌ಮಂಗಲ 60ನೇ ಬಾರಿ ರಕ್ತದಾನ ಮಾಡುವ ಮಾನವೀಯತೆ ಮೆರೆಯುತ್ತಿದ್ದಾರೆ. ರಕ್ತದಾನ ಮಾಡುವ ಉದ್ದೇಶಕ್ಕಾಗಿಯೇ ನೆಲದನಿ ಬಳಗ ಸಂಘಟನೆ ಕಟ್ಟಿಕೊಂಡ ಲಂಕೇಶ್‌ಮಂಗಲ ಶಿಬಿರಗಳನ್ನು ಏರ್ಪಡಿಸುತ್ತಾ ರಕ್ತ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ.
150ಕ್ಕೂ ಹೆಚ್ಚು ರಕ್ತದಾನ ಶಿಬಿರ: ನೆಲದನಿ ಬಳಗವನ್ನು 2014ರಲ್ಲಿ ಸ್ಥಾಪಿಸಿ ಅಂದಿನಿಂದ ಪ್ರತಿ ವರ್ಷ 15 ಶಿಬಿರಗಳಂತೆ ಆಯೋಜಿಸುತ್ತಿದ್ದಾರೆ. ಇದುವರೆಗೂ 150ಕ್ಕೂ ಹೆಚ್ಚು ಶಿಬಿರ ಆಯೋಜಿಸುವ ಮೂಲಕ ರಕ್ತ ಸಂಗ್ರಹ ಮಾಡುತ್ತಿದ್ದಾರೆ. ಮದುವೆ ಸಮಾರಂಭ, ಮಹಾನ್ ನಾಯಕರ ಜಯಂತಿ, ರಾಜಕೀಯ ನಾಯ ಕರ ಹುಟ್ಟುಹಬ್ಬ, ರಾಷ್ಟ್ರೀಯ ಹಬ್ಬ, ಶಾಲಾ-ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದಾರೆ.
175 ಯೂನಿಟ್ ರಕ್ತ ಸಂಗ್ರಹ: ಪ್ರತಿ ಶಿಬಿರದಲ್ಲಿ 175ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದೆ. ಕಳೆದ 8 ವರ್ಷದಿಂದ ಸಾಕಷ್ಟು ರಕ್ತವನ್ನು ದಾನಿಗಳಿಂದ ಸಂಗ್ರಹಿಸಿ ಮಿಮ್ಸ್‌ನ ರಕ್ತನಿಧಿ ಕೇಂದ್ರಕ್ಕೆ ನೀಡಿದ್ದಾರೆ. ಕೊರೊನಾ ವೇಳೆ ನೆಲದನಿ ಬಳಗದ ಕಾರ್ಯಕರ್ತರಿಂದಲೇ ರಕ್ತ ಸಂಗ್ರಹ ಮಾಡುವ ಮೂಲಕ ರಕ್ತದ ಕೊರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಯತ್ನಿಸಿದ್ದಾರೆ.
ಕುಟುಂಬ ರಕ್ತದಾನ ಶಿಬಿರ: ಬಳಗದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕುಟುಂಬ ಸಮೇತ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಕುಟುಂಬದ ದಂಪತಿ, ನೂತನ ವಧು-ವರರನ್ನು ಆಹ್ವಾನಿಸಿ ರಕ್ತ ಸಂಗ್ರಹಿಸಲಾಗುತ್ತಿದೆ. ಇದೊಂದು ವಿಶೇಷ ಶಿಬಿರವಾಗಿದೆ. ಅದರಂತೆ ಲಂಕೇಶ್‌ಮಂಗಲ, ಪತ್ನಿ ಸುನೀತಾ ಪ್ರತೀ ಕುಟುಂಬ ಸಮೇತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುತ್ತಿದ್ದಾರೆ. ಇವರ ಜತೆಗೆ ಬಳಗದ ಕಾರ್ಯದರ್ಶಿ ಯೋಗೇಶ್, ಪತ್ನಿ ಚೈತ್ರಾ
ಹಾಗೂ ಖಜಾಂಚಿ ಪ್ರತಾಪ್, ಪತ್ನಿ ರಶ್ಮಿ ರಕ್ತದಾನ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ರೋಗಿಗಳಿಗೆ ರಕ್ತದ ಅವಶ್ಯಕತೆ ಇರುವುದರಿಂದ ಇದೊಂದು ಸಮಾಜ ಸೇವೆ ಎಂದು ಕಳೆದ ಹಲವಾರು ವರ್ಷ ಗಳಿಂದ ರಕ್ತದಾನ ಮಾಡಿಕೊಂಡು ಬರುತ್ತಿದ್ದೇನೆ. ಈಗಾಗಲೇ ನಾನು 60 ಬಾರಿ ರಕ್ತ ದಾನ ಮಾಡಿದ್ದೇನೆ. ನೆಲದನಿ ಬಳಗ ಸ್ಥಾಪಿಸಿಬಳಗದ ಪದಾ ಧಿಕಾರಿಗಳೂ ರಕ್ತದಾನ ಮಾಡುತ್ತಿದ್ದು ಪ್ರೋತ್ಸಾಹ ನೀಡಿದ್ದಾರೆ.
●ಲಂಕೇಶ್‌ಮಂಗಲ,
ಅಧ್ಯಕ್ಷ, ನೆಲದನಿ ಬಳಗ
●ಎಚ್.ಶಿವರಾಜು