ಕೊಲಂಬೋ : ಹತ್ತು ವರ್ಷಗಳ ಹಿಂದೆ ಸಿಂಹಳ ಭಾಷೆಯ ಜನಪ್ರಿಯ ಪತ್ರಿಕೆಯೊಂದರ ಸಂಪಾದಕರ ಮೇಲೆ ಹಲ್ಲೆ ನಡೆಸಿದ್ದ ಲಂಕಾ ಸೈನಿಕನೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ಸೋಮವಾರ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಸಂಪಾದಕರ ಕಾರಿನ ಮೇಲೆ ದಾಖಲಾಗಿದ್ದ ಬೆರಳಚ್ಚು ಸೈನಿಕನ ಬೆರಳಚ್ಚಿಗೆ ಹೋಲುತ್ತಿದ್ದ ಸಾಕ್ಷ್ಯಾಧಾರದಲ್ಲಿ ಸೈನಿಕರನನ್ನು ಬಂಧಿಸಲಾಯಿತು.
2009ರ ಜನವರಿಯಲ್ಲಿ ರಿವಿರಾ ಪತ್ರಿಕೆಯ ಸಂಪಾದಕ ಉಪಾಲಿ ತೆನ್ನಕೂನ್ ಅವರನ್ನು ಆತನ ಪತ್ನಿಯ ಜತೆಗೆ ಆರೋಪಿ ಸೈನಿಕನು ಅಮಾನುಷವಾಗಿ ಥಳಿಸಿದ್ದ. ಸಂಡೇ ಲೀಡರ್ ಪತ್ರಿಕೆಯ ಸಂಪಾದಕ ಲಸಂತ ವಿಕ್ರಮತುಂಗ ಅವರ ಹತ್ಯೆಯಾದ ಎರಡು ವಾರಗಳಲ್ಲಿ ಈ ಘಟನೆ ನಡೆದಿತ್ತು.
ಈ ಘಟನೆಯ ಬಳಿಕ ತೆನ್ನಕೂನ್ ಅವರು ಅಮೆರಿಕದಲ್ಲಿ ವಾಸವಾಗಿದ್ದಾರೆ. 2005ರಿಂದ 2015ರ ವರೆಗೆ ಲಂಕೆಯಲ್ಲಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರ ಆಡಳಿತೆ ಇದ್ದಾಗ ಮಾಧ್ಯಮದವರ ಮೇಲೆ ನಡೆದಿದ್ದ ಹಲವಾರು ದಾಳಿ ಪ್ರಕರಣಗಳಲ್ಲಿ ತೆನ್ನಕೂನ್ ಅವರ ಮೇಲಿನ ಹಲ್ಲೆ ಘಟನೆಯೂ ಒಂದಾಗಿತ್ತು.