ಕೊಲಂಬೊ: ಶ್ರೀಲಂಕಾದಲ್ಲಿ ಸಂಭವಿಸಿದ ಈಸ್ಟರ್ ಸರಣಿ ಸ್ಫೋಟಗಳಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 11ಕ್ಕೇರಿದೆ. ಕೊಲಂಬೋದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಗಾಯಾಳು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಇತರ ವಿದೇಶಿ ಗಾಯಾಳುಗಳಲ್ಲಿಯೂ ಕೆಲವರು ಅಸುನೀಗಿದ್ದು, ಘಟನೆಯಲ್ಲಿ ಮೃತಪಟ್ಟ ವಿದೇಶಿಗರ ಸಂಖ್ಯೆ 36ಕ್ಕೇರಿದೆ ಎಂದು ಶ್ರೀಲಂಕಾದ ವಿದೇಶಾಂಗ ಇಲಾಖೆ ಹೇಳಿದೆ. ಜತೆಗೆ, 39 ದೇಶಗಳ ನಾಗರಿಕರಿಂದ ಬಂದಿದ್ದ ವೀಸಾ ಅರ್ಜಿಗಳನ್ನು ಪರಿಶೀಲನೆಯನ್ನು ಸದ್ಯಕ್ಕೆ ತಟಸ್ಥಗೊಳಿಸಲಾಗಿದೆ.
ರಕ್ಷಣಾ ಸಚಿವ ರಾಜೀನಾಮೆ: ಸರಣಿ ಸ್ಫೋಟದ ಬೆನ್ನಲ್ಲೇ ಶ್ರೀಲಂಕಾ ರಕ್ಷಣಾ ಸಚಿವ ಹೇಮಸಿರಿ ಫೆರ್ನಾಂಡೋ ಗುರುವಾರ ರಾಜೀನಾಮೆ ನೀಡಿದ್ದಾರೆ. ಗುಪ್ತಚರ ಮಾಹಿತಿ ಸಿಕ್ಕಿದ್ದರೂ ಸರಣಿ ಸ್ಫೋಟ ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಇವರಿಗೆ ರಾಜೀನಾಮೆ ನೀಡುವಂತೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೂಚಿಸಿದ್ದರು ಎನ್ನಲಾಗಿದೆ.
ಮಸೀದಿಯಲ್ಲೂ ಸ್ಫೋಟ?: ಇದೇ ವೇಳೆ, ಚರ್ಚುಗಳಲ್ಲಿ ಸ್ಫೋಟ ನಡೆಸಿದ ಉಗ್ರರು ಶುಕ್ರವಾರದ ಪ್ರಾರ್ಥನೆ ವೇಳೆ ಲಂಕಾದ ಮಸೀದಿಗಳಲ್ಲೂ ಸ್ಫೋಟ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮುದಾಯದ ಮಸೀದಿಗಳಿಗೆ ಭದ್ರತೆ ಒದಗಿಸಲಾಗಿದೆ. ಈಸ್ಟರ್ ಸ್ಫೋಟದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಗುರುವಾರ 16 ಜನರನ್ನು ಬಂಧಿಸಿದ್ದು, ಇದರಿಂದಾಗಿ ಈವರೆಗೆ ಬಂಧನ ಕ್ಕೊಳಗಾಗಿರುವವರ ಸಂಖ್ಯೆ 76ಕ್ಕೇರಿದೆ.
ಡ್ರೋಣ್ ಹಾರಾಟಕ್ಕೆ ನಿಷೇಧ: ಶ್ರೀಲಂಕಾದ ವೈಮಾನಿಕ ಮಂಡಲದಲ್ಲಿ ಡ್ರೋಣ್ ಅಥವಾ ಯಾವುದೇ ಮಾನವ ರಹಿತ ವಿಮಾನಗಳ ಹಾರಾಟಕ್ಕೆ ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ನಿಷೇಧ ಹೇರಿದೆ.
ನೆರೆಹೊರೆಯವರ ಅಚ್ಚರಿ
ಕೊಲಂಬೋದಲ್ಲಿ ಮಸಾಲೆ ಪದಾರ್ಥಗಳ ಅತಿ ದೊಡ್ಡ ವ್ಯಾಪಾರಿಯಾಗಿರುವ ಮೊಹಮ್ಮದ್ ಇಬ್ರಾಹೀಂನ ಪುತ್ರ ಇನ್ಶಾಫ್ ಇಬ್ರಾಹೀಂ (33) ಶಾಂಗ್ರಿ-ಲಾ ಹೋಟೆಲಿನಲ್ಲಿ ಬಫೆಯಲ್ಲಿ ಸ್ಫೋಟಿಸಿಕೊಂಡಿದ್ದು, ಅವನ ತಮ್ಮ ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗ ಸ್ಫೋಟಿಸಿಗೊಂಡು ತನ್ನ ಪತ್ನಿ, ಮೂವರು ಮಕ್ಕಳನ್ನೂ ಬಲಿ ತಗೆದುಕೊಂಡಿದ್ದಾನೆ. ಗೌರವ ಯುತ ಕುಟುಂಬ, ಬಡವರಿಗೆ ಸಹಾಯ ಮಾಡುವ ಕುಟುಂಬ ಎಂದೆಲ್ಲಾ ಹಿರಿಮೆ ಹೊಂದಿದ್ದ ಈ ಕುಟುಂಬ ಇಂಥ ರಾಕ್ಷಸೀ ಮನೋಭಾವ ಹೊಂದಿತ್ತೇ ಎಂದು ನೆರೆಹೊರೆಯವರು ಅಚ್ಚರಿ ಪಡುತ್ತಿದ್ದಾರೆ.