ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ.
ಇದಕ್ಕೆ ಒಲವಿನ ಓಲೆ ಅಂತೀಯೋ, ವಿರಹ ವೇದನೆ ಅಂತೀಯೋ ನಿನಗೆ ಬಿಟ್ಟದ್ದು. ಚೆಲುವಿಗೇ ಛಂದಸ್ಸು, ಸೌಂದರ್ಯಕ್ಕೆ ತೇಜಸ್ಸಿನಂತಿರುವ ನಿನ್ನ ಬಗ್ಗೆ ಅಕ್ಷರ ಜೋಡಿಸಬೇಕಾದರೆ ಭಾಷೆಯನ್ನು ಕತ್ತೆಯ ಥರ ದುಡಿಸಿಕೊಳ್ಳುವವನು ಕೂಡ ಒಂದರೆಕ್ಷಣ ನಿರುದ್ಯೋಗಿಯಾಗಿ ಬಿಡುತ್ತಾನೆ. ಇನ್ನು ನಾನೆಷ್ಟರವನು?
ಅದು ಹುಚ್ಚು ಕೋಡಿ ಮನಸ್ಸಿನ ವಯಸ್ಸು. ಪ್ರೀತಿಸಿದ ಜೀವ ಕೈ ಬಿಟ್ಟು ಹೋದಾಗ ಈ ಭೂಮಿ ಮೇಲೆ ನನಗೆ ಇವಳು ಬಿಟ್ರೆ ಬೇರೆ ಯಾರೂ ಇಲ್ಲ ಅಂತ ಅನಿಸಿದ್ದು ನೆನೆದ ತಲೆಯನ್ನು ಅವ್ವ ಒರೆಸಿದಾಗಲೇನೇ. ನೀ ಕಂಡಾಗ, ಒಂದೇ ಸಮನೆ ಬಡಿದುಕೊಂಡು ಕಾರಣ ಹೇಳದೆ ಕಂಗೆಡಿಸುವ ನನ್ನ ಹೃದಯ, ಪ್ರೀತಿ ಎಂಬ ವಿಐಪಿಯನ್ನು ಪರಿಚಯ ಮಾಡಿಕೊಳ್ಳಬೇಕಾದರೆ “ನನ್ನ ಒಪ್ಪಿಗೆ ಪಡೆಯೋ ಮೂರ್ಖ’ ಎನ್ನುವ ಕಣ್ಣುಗಳು. ಇದಕ್ಕೆಲ್ಲ ಏನು ಹೇಳುವುದೊ…? ಇಂದಿಗೂ ನನ್ನಲ್ಲಿ ಉತ್ತರವಿಲ್ಲ. ನಿನ್ನ ನೋಟಕ್ಕೆ ಹುಚ್ಚನಂತೆ ಕಾದಿದ್ದೆ. ಆದರೆ ಒಂದು ಮುಸ್ಸಂಜೆ ನೀ ನನ್ನ ನೋಡಿ ಅರ್ಥವಿಲ್ಲದ ನಗೆ ನಕ್ಕಾಗ ನನ್ನೊಳಗಿನ ಪ್ರೇಮಿ ಸಂಭ್ರಮ ಪಟ್ಟ ಪರಿಯಿದೆಯಲ್ಲ, ಅದು ಎಲ್ಲಾ ಹುಡುಗರಿಗೂ ಜೀವನದಲ್ಲಿ ಒಮ್ಮೆ ಮಾತ್ರ ದಕ್ಕುವ ಸುಖ.
ಒಂದು ಗುಲಾಬಿ ಹೂ ಕೂಡ ಕೊಡದೇ ಕಣ್ಣಿನಿಂದಲೇ ನಿನ್ನ ಪ್ರೀತಿಸುತ್ತಾ ಒಂದಿಡೀ ಮಳೆಗಾಲವನ್ನು ಕಳೆದ ಪರಿ ನೆನೆದು ನನ್ನೆದೆ ಆ ಎಲ್ಲಾ ಪ್ರೇಮಿಗಳಿಗಿಂತ ಖುಷಿಪಡುತಿತ್ತು. ನೂರು ಜನ್ಮಕಾಗುವಷ್ಟು ಧನ್ಯತೆ, ಉಲ್ಲಾಸ, ಜೀವನಪ್ರೀತಿಯನ್ನು ನನಗೆ ಕೊಟ್ಟಿದೆ ನನ್ನ ಪ್ರೇಮ. ಇದಕ್ಕೆಲ್ಲ ಕಾರಣ ನೀನು. ನಾನು ನಿನ್ನ ಪ್ರೀತಿಯ ಅಮಲಲ್ಲಿ ತೇಲಾಡುತ್ತಿದ್ದಾಗಲೇ ನೀನು ಇನ್ನೊಬ್ಬನನ್ನು ವ್ಯಾಮೋಹಿಸುತ್ತಿದ್ದೀಯ ಅಂತ ಗೊತ್ತಾದಾಗ ವಿಚಲಿತವಾಗಿದ್ದೆ. ಆದರೆ ನನಗೆ ಗೊತ್ತಾಗಿತ್ತು ನನ್ನ ಹೃದಯ ನಿನ್ನ ಭಾಷೆಯನ್ನು ತಪ್ಪಾಗಿ ಅರ್ಥೈಸಿತ್ತೆಂದು. ಇವಾಗಲಾದರೂ ಅನುವಾದ ಮಾಡುತ್ತಿಯಾ? ನವಜಾತ ಶಿಶು ನಾನು…
ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ. ಅದರ ನೆನಪುಗಳೇ ಸಾಕು…
– ಅಭಿಷೇಕ ಪಾಟೀಲ್, ಧಾರವಾಡ