Advertisement
ಹಲವು ಭಾಷೆಗಳ ನಾಡು ನಮ್ಮದು. ಮನೆಯಲ್ಲೊಂದು ನೆರೆ ಹೊರೆಯಲ್ಲೊಂದು, ಊರಿನಲ್ಲೊಂದು, ನಾಡಿನಲ್ಲೊಂದು ಹೀಗೆ ಬಹುಭಾಷಾ ನೆಲೆಯಲ್ಲಿ ಒಟ್ಟು ಸಮಾಜ ವ್ಯವಸ್ಥೆ, ಸಂಸ್ಕೃತಿ, ಜನಜೀವನ ಬೆಳೆದಿದೆ, ವಿಕಾಸ ಹೊಂದಿದೆ. ನಮ್ಮ ಭಾಷೆ ಬೇರೆ, ರಾಜ್ಯ ಭಾಷೆ ಬೇರೆ ಆಗಿದ್ದರೂ ವ್ಯಾವಹಾರಿಕವಾಗಿರುವ ಒಟ್ಟು ಪ್ರದೇಶ ವ್ಯಾಪಿ ರಾಜ್ಯ ಭಾಷೆಯನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ. ಶಿಕ್ಷಣ, ಶಿಕ್ಷಣದ ಮಾಧ್ಯಮವೂ ಇದೇ ಹಿನ್ನೆಲೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.
Related Articles
Advertisement
ಮಗು ಕಲಿಯುವುದು ಮತ್ತು ಕಲಿಯುವಂತೆ ಮಾಡುವುದು ಶಿಕ್ಷಣ. ಇಲ್ಲಿ ಭಾಷೆ ಒಂದು ಪ್ರಧಾನ ಸಲಕರಣೆ. ಓರ್ವ ಮಗು ತನ್ನ ಪರಿಸರದಲ್ಲಿ, ಸನ್ನಿವೇಶದಲ್ಲಿ, ವ್ಯವಹಾರದಲ್ಲಿರುವ ಭಾಷೆಯ ಮೂಲಕ ಚಿಂತನಾಕ್ರಮವನ್ನು ರೂಢಿಸಿಕೊಂಡಿರುತ್ತದೆ. ಆ ಮೂಲಕ ಶಬ್ದಗಳನ್ನು ಉತ್ಪಾದಿಸುವ, ಪ್ರಯೋಗಿಸುವ, ಉಚ್ಚರಿಸುವ ಕ್ರಿಯೆಗೆ ತೊಡಗುತ್ತದೆ. ಇದೇ ಭಾಷಾ ಕಲಿಕೆಯ ಆರಂಭ. ಮಗು ಮೂರು ವಿಧದಲ್ಲಿ ಭಾಷಾ ಕಲಿಕೆಗೆ ತೊಡಗಿಕೊಳ್ಳುತ್ತದೆ. ಒಂದು ತನ್ನೊಡನಿರುವವರ, ವಾತಾವರಣದಲ್ಲಿರುವವರ ವರ್ತನೆಗಳನ್ನು ನೋಡಿ . ಎರಡು ಸ್ವತಃ ಪ್ರಯೋಗಗಳಲ್ಲಿ ಮತ್ತು ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೂಲಕ. ಮೂರನೆಯದ್ದು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿಕೊಳ್ಳುತ್ತಾ. ಈ ಹಂತಗಳೇ ಶಾಲಾ ಶಿಕ್ಷಣದ ವ್ಯವಸ್ಥೆಯ ತಳಹದಿ. ಸುಮಾರಾಗಿ ಹದಿನಾರು ವರ್ಷದವರೆಗೂ ಮಗು ತನ್ನ ದೈಹಿಕ ಮಾನಸಿಕ ಬೆಳವಣಿಗೆಯ ವೇಗವನ್ನು ಹೊಂದಿರುತ್ತದೆ. ಅಲ್ಲಿಯವರೆಗೆ ಶಿಕ್ಷಣ ವಿಶಾಲ ವ್ಯಾಪ್ತಿಯಲ್ಲಿ ಮಗುವಿಗೆ ಅನುಭವ ಕೊಡಬೇಕು.
ಭಾಷೆಯ ಮೂಲಕ ಬೌದ್ಧಿಕವಾಗಿ ವಿಕಾಸ ಹೊಂದಬೇಕು. ಈ ಹಂತದಲ್ಲಿ ಉದ್ಯೋಗ, ಸ್ಪರ್ಧೆ, ಭವಿಷ್ಯ, ಮಾರುಕಟ್ಟೆ ಎಂದೆಲ್ಲ ಹೇಳಿ ಮಗುವಿನ ಕಲಿಕೆಯ ಮೂಲ ಅಂಶಗಳಿಗೆ ವಿರುದ್ಧವಾಗಿ ಶಿಕ್ಷಣದ ಆಶಯಗಳಿಗೆ ಕೊಳ್ಳಿ ಇಡಬಾರದು. ಇಲ್ಲಿ ಮೊದಲು ಆಗಬೇಕಾದ್ದು ಉತ್ತಮವಾಗಿ ಭಾಷೆಯನ್ನು ಕಲಿಸುವ ವ್ಯವಸ್ಥೆ ಹಾಗೂ ಎಲ್ಲ ವಿಷಯಗಳಲ್ಲಿ ಕಲಿಕಾ ಮಟ್ಟದ ಸುಧಾರಣೆ. ಗುಣಮಟ್ಟದ ಹೆಸರಿನಲ್ಲಿ, ಭವಿಷ್ಯದ ಪ್ರಶ್ನೆ ಎಂಬುದಾಗಿ ಮಗು ಏನು ಕಲಿಯಬೇಕು, ಹೇಗೆ ಕಲಿಯಬೇಕು, ಯಾಕೆ ಕಲಿಯಬೇಕು ಎಂಬ ಶಿಕ್ಷಣದ ಎಲ್ಲ ಶಾಸ್ತ್ರ ಸಿದ್ಧಾಂತಗಳಿಗೆ ಎಳ್ಳುನೀರು ಬಿಡಬಾರದು. ಮಗು ಭಾಷೆಯನ್ನು ಕಲಿಯಬೇಕೋ, ಭಾಷೆಯ ಬಗ್ಗೆ ಕಲಿಯಬೇಕೋ ಅಥವಾ ಭಾಷೆಯ ಮೂಲಕ ಕಲಿಯಬೇಕೋ ಎಂಬ ಕಲಿಕೆಯ ಮೂಲಾಂಶಗಳ ಅರಿವಿಲ್ಲದೆ ನರ್ಸರಿಯಿಂದಲೆ ಎಲ್ಲವನ್ನೂ ಭಾಷೆಯ ಮೂಲಕ ತುರುಕಲು ಹೊರಟಿದ್ದೇವೆ. ಮಗು ಮೊದಲು ಎದ್ದು ನಿಲ್ಲಬೇಕು. ಆ ಮೇಲೆ ನಡೆಯುತ್ತಾ ಅನಂತರ ಓಡುವುದಕ್ಕೆ ಬಲವಂತನಾಗಬೇಕು.
ಪ್ರೌಢ ಹಂತದಲ್ಲಿ ಮೂಲ ಶಿಕ್ಷಣದ ಕಲ್ಪನೆಯಲ್ಲಿ ಕೌಶಲ್ಯಗಳನ್ನು ಕಲಿಸೋಣ. ಅನಂತರದ ಶಿಕ್ಷಣ ವ್ಯವಸ್ಥೆಯೊಳಗೆ (ಪ್ರೌಢ ಹಂತದ ನಂತರ) ಆರ್ಥಿಕ ಮತ್ತು ವಾಣಿಜ್ಯ ಚಿಂತನೆಗಳು ಬರಲಿ. ಆಗ ಮಗು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸಶಕ್ತತೆ ಹೊಂದಿರುತ್ತದೆ. ಅದು ಬಿಟ್ಟು ಮಗುವನ್ನು ಒಂದು ಸರಕಾಗಿ ಪರಿಗಣಿಸಿ ತನ್ನದಲ್ಲದ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಮಾನಸಿಕ, ಬೌದ್ಧಿಕ, ಮಾನವಿಕ ಬೆಳವಣಿಗೆಗೆ ತೀರಾ ವಿರುದ್ಧ ಮಾತ್ರವಲ್ಲ ಭವಿಷ್ಯದಲ್ಲಿ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರದ ಮೇಲೆ ಸರಿಪಡಿಸಲಾಗದಷ್ಟು ಹೊಡೆತ ನೀಡುವುದರಲ್ಲಿ ಸಂಶಯವೇ ಇಲ್ಲ. ಮಗು ಸಂಪನ್ಮೂಲವಾಗಿ ಬೆಳೆಯಬೇಕೇ ಹೊರತು ಸಂಪತ್ತು ಸೃಷ್ಟಿಸುವ ಮತ್ತು ಕ್ರೋಢೀಕರಿಸುವವನಾಗಿ ಪ್ರೌಢ ಹಂತದವರೆಗೆ ಬೆಳೆಸಬಾರದು. ಅನಂತರದ ಹಂತದಲ್ಲಿ ನಾವು ಪಥ ತೋರಿಸುವ ಅಥವಾ ಆತನೇ ಪಥ ಆಯ್ಕೆ ಮಾಡಿಕೊಳ್ಳಲಿ.
ಇಂದಿನ ಪ್ರಾಥಮಿಕ, ಪ್ರೌಢ ಶಿಕ್ಷಣದ ಧೋರಣೆಗಳಿಗೆ ಅರ್ಥವಿಲ್ಲ ತಳಹದಿಯೂ ಇಲ್ಲ. ಬದಲಾವಣೆಯ ಹೆಸರಲ್ಲಿ ಶಿಕ್ಷಣ ಶಾಸ್ತ್ರದ ಸಿದ್ಧಾಂತಗಳ ಎಲ್ಲ ಅಂಶಗಳನ್ನು ಗಾಳಿಗೆ ತೂರಿ ಜಳ್ಳನ್ನೇ ಸುಧಾರಣೆಯೆನ್ನುತ್ತಾರೆ. ಮಾಧ್ಯಮದ ಹೆಸರಲ್ಲಿ ಅತ್ತ ಕನ್ನಡವೂ ಇಲ್ಲದೆ ಇಂಗ್ಲೀಷೂ ಇಲ್ಲದೆ ನಮ್ಮ ಕನ್ನಡ ಶಾಲೆಗಳನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುವುದೇ ಇಂದಿನ ಸುಧಾರಣೆಯಾಗಿದೆ. ಸರಕಾರ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ತಾಕತ್ತನ್ನು ತೋರಿಸಬೇಕು. ಉನ್ನತ ಹಂತಕ್ಕೆ ಬೇಕಾಗಿ ಮಗುವಿನ ಬೌದ್ಧಿಕ ವಿಕಾಸಕ್ಕೆ, ಮಾನವತೆಯ ಬೆಳವಣಿಗೆಗೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ನೆಲೆಗಟ್ಟಿಗೇಕೆ ಕೊಡಲಿ ಇಡಬೇಕು?
-ರಾಮಕೃಷ್ಣ ಭಟ್ ಚೊಕ್ಕಾಡಿ