Advertisement
ವಿಜ್ಞಾನದ ವಿವಿಧ ಪ್ರಯೋಗಗಳಿಗಾಗಿ ವಿದ್ಯಾರ್ಥಿಗಳು ಲ್ಯಾಬ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆ ಹೆಚ್ಚಿಸಲು, ಅದರಲ್ಲೂ ಇಂಗ್ಲಿಷ್ ಸಂವಹನ ಮತ್ತು ಕೌಶಲ್ಯತೆ ವೃದ್ಧಿಗೆ ಲ್ಯಾಂಗ್ವೇಜ್ ಲ್ಯಾಬ್ ತೆರೆಯುವ ಪ್ರಕ್ರಿಯೆ ಆರಂಭವಾಗಿದೆ.
Related Articles
Advertisement
ಹೊಸ ಸಾಫ್ಟ್ವೇರ್: “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಭಾಷೆಯ ಅಧ್ಯಯನ ಮಾಡುತ್ತಾರೆ. ಆರಂಭಿಕ ಹಂತದಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಇಂಗ್ಲಿಷ್ ವ್ಯಾಕರಣ, ಇಂಗ್ಲಿಷ್‌ನಲ್ಲಿ ಸಂವಾದ ಮಾಡುವುದು, ವಾಕ್ಯಗಳ ಜೋಡಣೆ, ಕ್ಲಿಷ್ಟಕರ ಪದದ ಉಚ್ಛಾರಣೆ ಇತ್ಯಾದಿ ಎಲ್ಲವನ್ನು ಸಾಫ್ಟ್ವೇರ್ ಮೂಲಕ ಅತ್ಯಂತ ಸುಲಭವಾಗಿ ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದಾಗಿದೆ.
ರಾಜ್ಯದ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಇಂಗ್ಲಿಷ್ ಭಾಷೆಯ ತರಬೇತಿ ನೀಡುವ ಪ್ರಾದೇಶಿಕ (ದಕ್ಷಿಣ ಭಾರತ)ಇಂಗ್ಲಿಷ್ ಸಂಸ್ಥೆಯು ಹೊಸ ಸಾಫ್ಟ್ವೇರ್ ಸಿದ್ಧಪಡಿಸಿ, ಇಲಾಖೆಗೆ ನೀಡಿದೆ. ಆ ಸಾಫ್ಟ್ವೇರ್‌ಗಳನ್ನು ಕಾಲೇಜಿನ “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿರುವ ಕಂಪ್ಯೂಟರ್‌ಗಳಿಗೆ ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳು ಯಾರ ಸಹಾಯವೂ ಇಲ್ಲದೇ ಅತ್ಯಂತ ಸುಲಭವಾಗಿ ಇಂಗ್ಲಿಷ್ ಭಾಷೆ ಕಲಿಯಲು ಇದು ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಆಸಕ್ತಿಯಂತೆ ವಿಸ್ತರಣೆ: ಸದ್ಯ “ಲ್ಯಾಂಗ್ವೇಜ್ ಲ್ಯಾಬ್’ನಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ಆಸಕ್ತಿ ಹೇಗಿದೆ ಮತ್ತು ಅವರ ಬೇಡಿಕೆಗೆ ಅನುಗುಣವಾಗಿ, ಭವಿಷ್ಯದಲ್ಲಿ ಉದ್ಯೋಗಕ್ಕೂ ಪೂರಕವಾಗುವಂತೆ ವಿವಿಧ ವಿದೇಶಿ ಭಾಷೆಗಳನ್ನು ಜೋಡಿಸುವ ಯೋಚನೆಯಿದೆ. ಆದರೆ, ವಿದ್ಯಾರ್ಥಿಗಳಿಂದ ಯಾವ ರೀತಿಯ ಪ್ರತಿಕ್ರಿಯೆ ಮತ್ತು ಬೇಡಿಕೆ ಬರುತ್ತದೆ ಎಂಬುದರ ಮೇಲೆ ಇದು ನಿರ್ಧರವಾಗಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಹೊಸ ಐದು ಕೋರ್ಸ್‌ಗಾಗಿ ಚರ್ಚೆ: ಕೌಶಲ್ಯಾಧಾರಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೌಶಲ್ಯಯುಕ್ತ ಅಪ್ರಂಟಿಷಿಪ್ ಆಧಾರಿತ 5 ಸ್ನಾತಕ ಹಾಗೂ 1 ಸ್ನಾತಕೋತ್ತರ ಕೋರ್ಸ್‌ಗಳನ್ನು ಬಿಕಾಂ, ಬಿಬಿಎಂ ಪದವಿಗೆ ಪರಿಚಯಿ ಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ರಾಜ್ಯದ 50 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರ ಸಭೆಯನ್ನು ನಾಳೆ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.
* ರಾಜು ಖಾರ್ವಿ ಕೊಡೇರಿ