Advertisement

ಭಾಷಾಭಿವೃದ್ಧಿ ವಿಧೇಯಕ ಕನ್ನಡ ಅಸ್ಮಿತೆಗೆ ಗರಿ

05:39 PM Dec 18, 2021 | Team Udayavani |

ಧಾರವಾಡ: ಕನ್ನಡದ ಸಂಕಷ್ಟಗಳನ್ನು ಅರಿತು ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ಸಿದ್ಧಪಡಿಸಿ, ಮಸೂದೆಯಾಗಿ ಮಂಡಿಸಲು ನೀಡಿ¨ªೇವೆ. ಅದು ಮಂಡನೆಯಾದರೆ ಕನ್ನಡದ ಅಸ್ಮಿತೆಗೆ ಒಂದು ಗರಿ, ಶಕ್ತಿ ಮೂಡಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಹೇಳಿದರು.

Advertisement

ನಗರದಲ್ಲಿ ಕಸಾಪದ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ನಾಡು-ನುಡಿ ಕುರಿತ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ಉದ್ಯೋಗ ಹಾಗೂ ಆಡಳಿತದಲ್ಲಿ ಕನ್ನಡ ಇರದಿರುವುದೇ ಕನ್ನಡ ಭಾಷಾ ಸಂಕಷ್ಟಕ್ಕೆ ಕಾರಣವಾಗಿದ್ದು, ಈ ಬಗ್ಗೆ ಅರಿವಿಗೆ ಬಂದಿದೆ. ಹೀಗಾಗಿಯೇ ಕನ್ನಡದ ಅಸ್ಮಿತೆಗಾಗಿ, ಶಕ್ತಿ ಮೂಡಿಸಲು ವಿಧೇಯಕ ಸಹಕಾರಿ ಆಗಲಿದೆ. ಈ ಹಿನ್ನೆಲೆಯಲ್ಲಿಯೇ ವಿಧೇಯಕ ಸಿದ್ಧಪಡಿಸಲಾಗಿದೆ. ಭವಿಷ್ಯ ಅರ್ಥ ಮಾಡಿಕೊಳ್ಳದೇ ಕೇವಲ ಗತಕಾಲದ ವೈಭವವನ್ನೇ ಮೆಲುಕು ಹಾಕಿದರೆ ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆ ಸಾಧ್ಯವಿಲ್ಲ. ಹೀಗಾಗಿ ಪ್ರಾಧಿಕಾರದ ವತಿಯಿಂದ 60 ಸಾವಿರ ಕನ್ನಡ ಪದಗಳನ್ನು ಇ-ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಅದರಲ್ಲೂ ಈಗ ನೂತನ ಶಿಕ್ಷಣ ಪದ್ಧತಿಯಲ್ಲಿ ಸರ್ಕಾರವು ಕನ್ನಡವನ್ನು ಕಡ್ಡಾಯ ಮಾಡಲೇಬೇಕು ಎಂದರು.

ಮಹಿಳೆ ಸಿಎಂ ಆಗಲಿ: ದೇಶದ ಬೇರೆ ರಾಜ್ಯಗಳಲ್ಲಿ ಮಹಿಳಾ ಸಿಎಂ ಆಗಿದ್ದು, ಕರ್ನಾಟಕದಲ್ಲಿ ಈವರೆಗೂ ಮಹಿಳಾ ಸಿಎಂ ಆಗಿಲ್ಲ. ಇದನ್ನು ಗಮನಿಸಿದಾಗ ನಮ್ಮಲ್ಲಿ ರಾಜಕೀಯವಾಗಿ ಮಹಿಳೆಯರಿಗೆ ಎಷ್ಟು ಪ್ರಾತಿನಿಧ್ಯ ನೀಡಲಾಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ಆಡಳಿತದಲ್ಲಿ ಮಹಿಳೆ ಬಗ್ಗೆ ಯೋಚನೆ ಮಾಡುತ್ತೇವೆ. ಅದೇ ರೀತಿ ರಾಜಕೀಯದಲ್ಲೂ ಬೆಳೆದಾಗ ಮಾತ್ರ ಅದೊಂದು ಶಕ್ತಿ ಆಗಲು ಸಾಧ್ಯ. ತಾಯಿಯೇ ಮೊದಲ ಗುರುವಾಗಿರುವುದರಿಂದ ಮಹಿಳೆಯರು ರಾಜ್ಯದ ಮುಖ್ಯಮಂತ್ರಿಯಾದಲ್ಲಿ ಭಾಷೆಯ ಉಳಿವು ಸಾಧ್ಯವಿದೆ ಎಂದರು.

ಸರ್ಕಾರಿ ಉದ್ಯೋಗದಲ್ಲಿ ಶೇ. 12 ಕನ್ನಡಿಗರಿಗೆ ಅವಕಾಶವಿದ್ದರೆ, ಖಾಸಗಿ ಕಂಪನಿಗಳು ರಾಜ್ಯದಲ್ಲಿನ ಎಲ್ಲ ಸೌಲಭ್ಯ ಪಡೆದೂ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ. ಒಂದು ಭಾಷೆ ಶಿಕ್ಷಣ ಮೂಲಕ ಉದ್ಯೋಗದತ್ತ ಮನಸ್ಸು ಮಾಡಿದರೆ ಏರುಮುಖವಾಗಿ ಬೆಳೆಯುತ್ತದೆ. ಆದರೆ ಇಂದಿನ ಔದ್ಯೋಗಿಕ ಪರಿಸ್ಥಿತಿಯಲ್ಲಿ ಕನ್ನಡ ಅನ್ನದ ಭಾಷೆ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಮಾಲತಿ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಶ್ರೀನಿವಾಸ ವಾಡಪ್ಪಿ, ಆನಂದ ಪಾಟೀಲ, ಶಂಕರ ಕುಂಬಿ, ನಿಂಗಣ್ಣ ಕುಂಟಿ ಇನ್ನಿತರರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ರಜಿಸ್ಟ್ರಾರ್‌ ಎನ್‌. ಕರಿಯಪ್ಪ ಸ್ವಾಗತಿಸಿದರು. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ರಾಜೇಶ್ವರಿ ಮಹೇಶ್ವರಯ್ಯ ಪ್ರಾಸ್ತಾವಿಕ ಮಾತನಾಡಿದರು.

ಡಾ| ಪ್ರಜ್ಞಾ ಮತ್ತಿಹಳ್ಳಿ ನಿರೂಪಿಸಿದರು. ಡಾ| ಜಿನದತ್ತ ಹಡಗಲಿ ವಂದಿಸಿದರು. ವಿಚಾರ ಸಂಕಿರಣದಲ್ಲಿ ರಾಜ್ಯೋದಯದ ನಂತರದಲ್ಲಿ ಕನ್ನಡಿಗರ ಸಂಸ್ಕೃತಿ ಪಲ್ಲಟಗಳು ಹಾಗೂ ಆಡಳಿತಗಾರರಾಗಿ ಕನ್ನಡತಿಯರು ಎಂಬ ವಿಷಯ ಕುರಿತು ಗೋಷ್ಠಿಗಳು ನಡೆದವು. ಇದಾದ ಬಳಿಕ ಮಹಿಳಾ ಕವಿಗೋಷ್ಠಿ, ಸಮಾರೋಪ ಸಮಾರಂಭ ಜರುಗಿತು.

ಆಧುನಿಕ ಸಮಾಜದಲ್ಲಿ ಯಂತ್ರಜ್ಞಾನದ ಬಳಕೆ ಜತೆಗೆ ಭವಿಷ್ಯದ ಕನ್ನಡ ಕಟ್ಟುವ ಬಗೆಯನ್ನೂ ಕಂಡುಕೊಳ್ಳಬೇಕು. ಮುಂದಿನ ಪೀಳಿಗೆ ಜತೆಗೆ ಹೆಜ್ಜೆ ಹಾಕಲು ಕೇವಲ ಸಾಹಿತ್ಯ ಮಾತ್ರವಲ್ಲದೆ, ಸಾಹಿತ್ಯದ ಜತೆಗಿನ ಎಲ್ಲ ಉಪಕ್ರಮಗಳನ್ನು ಯಂತ್ರಜ್ಞಾನದ ಜತೆಗೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.
ಟಿ.ಎಸ್‌. ನಾಗಾಭರಣ,
ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡದ ಗಡಿನಾಡು, ಭಾಷೆ ಹಾಗೂ ಸಂಸ್ಕೃತಿ ಉಳಿವಿನ ಹೋರಾಟದ ಬದಲಾಗಿ ಕನ್ನಡ ಮಕ್ಕಳನ್ನು ಕನ್ನಡ ಮಕ್ಕಳಾಗಿ ಉಳಿಸಿ ಅನ್ನುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಇನ್ನೂ ಬಂಡಾಯ ಚಳವಳಿಯ ನಂತರ ಆ ಒಗ್ಗಟ್ಟು ಮಾಯವಾಗಿ ಎಡ-ಬಲ ಚರ್ಚೆಯೇ ಹೆಚ್ಚಾಯ್ತು. ಇದು ಒಂದಾಗದ ಹೊರತು ಮಹಾಮನೆ ನಿರ್ಮಾಣ ಸಾಧ್ಯವೇ ಇಲ್ಲ.
ಡಾ| ಬಿ.ಎ. ವಸಂತಕುಮಾರ,
ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next