ಬೀದರ: ಧರ್ಮ ಉಳಿಯಲು ಸಾಹಿತ್ಯ ಬೇಕು. ಸಾಹಿತ್ಯ ಉಳಿಯಲು ಸಾಹಿತಿಗಳು ಹಾಗೂ ಸಂತರು ಬೇಕು. ಅವರ ಮಾರ್ಗದರ್ಶನದಿಂದ ಮಾತ್ರ ಭಾಷೆ ಬೆಳೆಯುತ್ತದೆ ಎಂದು ಮಹಾರಾಷ್ಟ್ರದ ಸೊಲ್ಲಾಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಧನ್ಯಕುಮಾರ ಬಿರಾಜದಾರ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ವಿಭಾಗದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಿಂದಿ ಸಾಹಿತ್ಯ ವಿಶ್ವದರ್ಜೆಗೇರಲು ಸಂತರ ಶ್ರಮ’ ಕುರಿತ ಮೊದಲನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತೀಯ ಸಂತರಲ್ಲಿ ಮುಖ್ಯವಾಗಿ 19ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯ ಮಾಡಿದರು. ಸಂತರಿಗೆ ಸದಾ ಮಾತೃ ಹೃದಯವಿರುವುದರಿಂದ ಅವರಿಂದ ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಾಗುತ್ತಿದೆ ಎಂದರು.
ಜಗತ್ತಿನಲ್ಲಿ ಕೇವಲ ಶಾಸ್ತ್ರಗಳಿಂದ ಮಾತ್ರ ಅಭಿವೃದ್ಧಿಯಾಗುವುದಿಲ್ಲ. ಶಾಸ್ತ್ರದ ಜತೆಗೆ ಸಂಸ್ಕೃತಿ ಆಚರಣೆ ಕೂಡ ಮುಖ್ಯವಾಗುತ್ತದೆ. ಅದು ನಮಗೆ ಮೌಲ್ಯ, ನೈತಿಕತೆ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದೆ. ಅದರಲ್ಲೂ ಹಿಂದಿ ಸಾಹಿತ್ಯ ಬಹು ಪ್ರಭಾವಶಾಲಿ ಸಾಹಿತ್ಯವಾಗಿರುವುದರಿಂದ ವಿಶ್ವ ಭಾರತದತ್ತ ನೋಡಲು ಸಹಕಾರಿಯಾಗಿದೆ ಎಂದರು. ದೇಶ ಸ್ವತಂತ್ರವಾಗಿ 7 ದಶಕಗಳು ಕಳೆದರೂ ಕೂಡ ಹಿಂದಿ ಅಂತಾರಾಷ್ಟ್ರೀಯ ಭಾಷೆಯಾಗಿ ಗುರುತಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ನಮ್ಮಲ್ಲಿನ ದೇಶಭಕ್ತಿ, ದೇಶಪ್ರೇಮದ ಕೊರತೆ, ಬಡತನ, ಅನಕ್ಷರತೆ, ಜಾತೀಯತೆ, ಭಯೊತ್ಪಾದನೆ, ಭ್ರಷ್ಟಾಚಾರ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಶ್ವ ಶಾಂತಿಗಾಗಿ ಜಗತ್ತಿನಲ್ಲಿ ನೊಬೆಲ್ ಪಾರಿತೋಷಕ ನೀಡಲಾಗುತ್ತಿದೆ. ಆದರೆ ಇಂದು ಭಯೋತ್ಪಾದನೆ ಹಾಗೂ ಆಕ್ರಮಣವು ಜಗತ್ತಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದೆ. ತಂತ್ರಜ್ಞಾನ ಹಾಗೂ ಭಾರಿ ಶಸ್ತ್ರಾಸ್ತ್ರಗಳಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಅಲ್ಲಿ ಸಾಹಿತ್ಯದ ಗಂಧ ಬೆಳೆಯಬೇಕೆಂದು ಹೇಳಿದರು.
‘ಹಿಂದಿ ಭಾಷೆಯನ್ನು ಅಂತಾರಾಷ್ಟ್ರೀಯ ಭಾಷೆಯಾಗಿ ಪರಿವರ್ತಿಸಲು ಸಾಹಿತಿಗಳ ಪರಿಶ್ರಮ’ ಕುರಿತು ದೆಹಲಿಯ ಸಾಹಿತಿ ಡಾ| ಹರೀಶ ಅರೋಡಾ ವಿಚಾರ ಮಂಡಿಸಿದರು. ಜಾಗತಿಕ ಮಟ್ಟದಲ್ಲಿ ಹಿಂದಿ ಭಾಷೆಯ ಸ್ಥಿತಿಗತಿ ಕುರಿತು ಡಾ| ಗಣಪತ ರಾಠೊಡ್ ವಿಚಾರ ಮಂಡಿಸಿದರು. ಬೆಲ್ಜಿಯಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಮೇಶಚಂದ್ರ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಡಾ| ಸವಿತಾ ತಿವಾರಿ, ಪ್ರೊ| ಹೇಮಾ ಸುಲ್ತಾನಪುರೆ, ಅನುಸೂಯಾ ಗಾಯಕವಾಡ, ಆನಂದರಾವ್ ಶೇರಿಕಾರ, ಡಾ| ಲಕ್ಷ್ಮಣ ಭೋಸಲೆ ಹಾಗೂ ಇನ್ನಿತರರು ಇದ್ದರು.