Advertisement
ಸಂತ್ರಸ್ತ ಶಿಬಿರಗಳಲ್ಲಿ ಆಶ್ರಯ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆತಂಕದ ಸ್ಥಿತಿ ಸೃಷ್ಟಿಯಾಗಿದೆ. ಬಿಡದೆ ಸುರಿವ ಮಳೆಯಿಂದಾಗಿ ಮಳೆ ನೀರಲ್ಲಿ ಸಿಲುಕಿದ ಜನರನ್ನು ಸಂತ್ರಸ್ತರ ಶಿಬಿರಗಳಿಗೆ ತಲುಪಿಸುವಿದೇ ಸವಾಲಾಗಿದ್ದು ಅರಕ್ಷಕ ಪಡೆ, ಮಿಲಿಟರಿ, ಅಗ್ನಿ ಶಾಮಕ ದಳ ಹಾಗೂ ಸಾಮಾಜಿಕ ಕಾರ್ಯಕರ್ತರು ತಮ್ಮ ಜೀವವನ್ನೂ ಲೆಕ್ಕಿಸದೆ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ.
Related Articles
Advertisement
3 ದಿನದಲ್ಲಿ ಒಂದು ತಿಂಗಳ ಮಳೆ
ಆಗೋಸ್ತು 7ರಿಂದ 9ರ ವರೆಗಿನ ಮೂರು ದಿನಗಳಲ್ಲಿ ಒಂದು ತಿಂಗಳು ಸುರಿವ ಮಳೆ ಸುರಿದಿರುವುದು ಮತ್ತು ಮುಂದಿನ ದಿನಗಳಲ್ಲೂ ಅದರ ಪ್ರಮಾಣ ಕಡಿಮೆಯಾಗದೇ ಇರುವುದು ಈ ದುರಂತ ಸಾಧ್ಯತೆಯನ್ನು ಹೆಚ್ಚಿಸಿದೆ. ರಾಜ್ಯದ ಪ್ರಧಾನ ನದಿಗಳಾದ ಪೆರಿಯಾರ್, ಭಾತರ ಹೊಳೆ ಸೇರಿದಂತೆ ಎಲ್ಲಾ ನದಿಗಳೂ ತುಂಬಿ ಅಪಾಯದಂಚನ್ನು ಮೀರಿ ಹೊರಹರಿಯುತ್ತಿವೆ.
ಹೆಚ್ಚುತ್ತಿರುವ ಜೀವಹಾನಿ
ವಿವಿಧ ಜಿಲ್ಲೆಗಳಲ್ಲಾಗಿ ಮಹಾಮಳೆಗೆ ಬಲಿಯಾದ ಜನರ ಸಂಖ್ಯೆ 50 ದಾಟಿದ್ದು ನೆರೆಪೀಡಿತ ಪ್ರದೇಶಗಳ 15000ಕ್ಕಿಂತಲೂ ಅಧಿಕ ಮಂದಿಯನ್ನು ಸುರಕ್ಷಿತ ಸಂತ್ರಸ್ತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯೂ ತತ್ತರ
ಕಳೆದ 5 ದಿನಗಳಿಂದ ಬಿಡದೆ ಸುರಿವ ಮಳೆಗೆ ಕಾಸರಗೋಡು ಜಿಲ್ಲೆಯೂ ತತ್ತರಿಸಿ ಹೋಗಿದೆ. ರಸ್ತೆಯ ಮೇಲೆ ಭೂಕುಸಿತ, ವಿದ್ಯುತ್ ವ್ಯತ್ಯಯ, ಮನೆ ಕುಸಿತ, ಧರೆಗುರುಳುವ ಮರಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಕಂಡುಬರುತ್ತದೆ. ಹೆಚ್ಚಿನ ಭಾಗಗಳಲ್ಲೂ ಭಾರೀ ಮಳೆ ಸುರಿಯುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ.ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿ ವಿಪತ್ತು ನಿರ್ವಹಣಾ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಆದರೆ ಕತ್ತಲು ಕವಿದ ವಾತಾವರಣ, ಮಳೆಯಿಂದಾಗಿ ಪರಿಹಾರ ಕಾರ್ಯಕ್ಕೆ ತಡೆ ಉಂಟಾಗುತ್ತಿದೆ ಎನ್ನಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಾಗಿ 15 ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದ್ದು ಸುಮಾರು 2000ದಷ್ಟು ಜನರನ್ನು ಸ್ಥಳಾಂತರಿಸಲಾಗಿದೆ.
ಮಳೆ: ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ
ಗಾಳಿಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ತಡೆ ಉಂಟಾಗಿರುವುದು ಜಿಲ್ಲೆಯ ಜನತೆಗೂ ಸಮಸ್ಯೆಯುಂಟುಮಾಡುತ್ತಿದೆ. ಎರಡು ದಿನಗಳಿಂದ ತರಕಾರಿ ಸೇರಿದಂತೆ ಅಗತ್ಯದ ವಸ್ತುಗಳು ಜಿಲ್ಲೆಗೆ ಬರುವಲ್ಲಿ ಉಂಟಾದ ತಡೆ ಅವುಗಳ ಬೆಲೆ ಗಗನಕ್ಕೇರುವಂತೆ ಮಾಡಿದೆ.
ಕಂಟ್ರೋಲ್ ರೂಂ
ಕಾಂಞಂಗಾಡ್ ತಾಲೂಕು ಕಚೇರಿಯ ಆಶ್ರಯದಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಿಯಂತ್ರಣ ಕೊಠಡಿ ಪ್ರಾರಂಭಿಸಿದ್ದು ಪೊಲೀಸ್, ಅಗ್ನಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹೊಸದುರ್ಗ, ವೆಲ್ಲರಿಕುಂಡು ತಾಲೂಕುಗಳ ಸಂಪೂರ್ಣ ಪರಿಹಾರ ಕಾರ್ಯಗಳಿಗಾಗಿ ಸಮನ್ವಯಗೊಳಿಸಲಾಗಿದೆ. ತಕ್ಷಣದ ಸಹಾಯಕ್ಕಾಗಿ 04672204042, 8075325955, 7510935739 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.