ಹಾಸನ: ಶಿರಾಡಿ ಘಾಟ್‌ನ ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಯಡಕುಮರಿ ರೈಲು ನಿಲ್ದಾಣದ ಸಮೀಪ ರೈಲು ಹಳಿಗಳ ಮೇಲೆ ಭೂ ಕುಸಿತ ತೆರವು ಕಾರ್ಯಾಚರಣೆ ಸತತ 4 ನೇ ದಿನವಾದ ಸೋಮವಾರವೂ ಭರದಿಂದ ನಡೆಯುತ್ತಿದ್ದು, ಇನ್ನಷ್ಟು ದಿನಗಳ ಅಗತ್ಯವಿದೆ ಎಂದು ಮೈಸೂರು ರೈಲ್ವೆ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು – ಮಂಗಳೂರು ಹಾಗೂ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರವನ್ನು ಆ. 4 ರವರೆಗೆ ರದ್ದುಪಡಿಸಲಾಗಿದೆ.
ರೈಲು ಮಾರ್ಗದ ಮೇಲಿನ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾರ್ಯಾಚರಣೆಯಲ್ಲಿ 500 ಕ್ಕೂ ಹೆಚ್ಚು ಕಾರ್ಮಿಕರು ಧಾರಾಕಾರ ಮಳೆಯ ನಡುವೆಯೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀ ವಾಸ್ತವ ಮತ್ತು ಹಿರಿಯ ಅಧಿಕಾರಿಗಳು ಮಣ್ಣು ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದ್ದರೂ ಇಂತಿಷ್ಟು ದಿನದಲ್ಲಿ ಹಳಿ ದುರಸ್ತಿ ಮುಗಿಯುವುದೆಂದು ಹೇಳಲು ಸಾಧ್ಯವಿಲ್ಲ. ಆ. 4 ರ ನಂತರವೂ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವುದು ಕಷ್ಟವಿದೆ. ಇನ್ನೂ ಒಂದು ವಾರ ಬೇಕಾಗಬಹುದು ಎಂದು ಹೇಳಿದ್ದಾರೆ.