ಕಾಪು: ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಂಬಗುಡ್ಡೆ ವಾರ್ಡ್‌ನ ಕುಡ್ತಿಮಾರಿನಲ್ಲಿರುವ ಇತಿಹಾಸ ಪ್ರಸಿದ್ಧ ಜಿಡ್ಡಿ ಖೇಡ್ ಕೆರೆಯ ದಂಡೆ ಕುಸಿದು ಭಾರೀ ಅಪಾಯದ ಮುನ್ಸೂಚನೆಯನ್ನು ನೀಡಿದೆ. ಭಾರೀ ಮಳೆಯ ಕಾರಣದಿಂದಾಗಿ ಜಿಡ್ಡಿ ಖೇಡ್ ಕೆರೆಯ ಪೂರ್ವ ಭಾಗದ ದಂಡೆಯು ಕುಸಿದು ಬಿದ್ದಿದ್ದು, ಹದಿನೈದು ಅಡಿಯಷ್ಟು ಎತ್ತರದ ದಂಡೆಯಲ್ಲಿರುವ ಮೂರು ವಾಸದ ಮನೆಗಳು ತೀವ್ರ ಅಪಾಯದ ಸ್ಥಿತಿಗೆ ಸಿಲುಕಿವೆ. ಬಯಲು ಪ್ರದೇಶದಲ್ಲಿರುವ ಕೆರೆ ಮತ್ತು ಎತ್ತರ ಪ್ರದೇಶದಲ್ಲಿರುವ ದಂಡೆಯ ನಡುವೆ ಕನಿಷ್ಟ 15 ಅಡಿಯಷ್ಟು ಎತ್ತರದ ಅಂತರವಿದ್ದು, ಈ ಕೆರೆಯ ದಂಡೆಗೆ ತಾಗಿಕೊಂಡು ಅಬ್ದುಲ್ ಮಜೀದ್, ಅಬ್ದುಲ್ ರಹಿಮಾನ್ , ಮಹಮ್ಮದ್ ಯೂನುಸ್ ಎಂಬವರ ಮನೆಗಳಿವೆ.
ಕೆರೆಯ ದಂಡೆ ಕುಸಿತದಿಂದಾಗಿ ಮೂರು ಮನೆಗಳ ಜನರೂ ಆತಂಕಕ್ಕೊಳಗಾಗಿದ್ದು, ಒಂದಂಶ ಹೆಚ್ಚು ಕುಸಿದರೂ ಮನೆಯ ಛಾವಡಿಯವರೆಗೆ ಕುಸಿಯುವ ಭೀತಿಯಿದೆ. ಈ ಹಿಂದೆ ಮನೆಯವರೇ ಕೆರೆ ದಂಡೆಗೆ ಕಲ್ಲು ಕಟ್ಟುವ ಪ್ರಯತ್ನ ಮಾಡಿದ್ದಾರಾದರೂ ಅದು ಕೂಡಾ ಮಳೆಗಾಲಕ್ಕೆ ಮೊದಲೇ ಕೆರೆ ಪಾಲಾಗಿತ್ತು. ಮಲ್ಲಾರು – ಕುಡ್ತಿಮಾರ್ ಪ್ರದೇಶದ ಕೃಷಿಕರಿಗೂ ಜಿದ್ದಿ ಕೇಡ್ ಆಸರೆಯಾಗಿದೆ. ಆದರೆ ಕೆರೆಯು ಹದಿನೈದು ವರ್ಷದ ಹಿಂದೆ ಕುಸಿತಕ್ಕೊಳಗಾಗಿದ್ದು, ಕುಸಿತಕ್ಕೊಳಗಾಗಿರುವ ಪ್ರದೇಶದಲ್ಲಿ ಮನೆಯವರು ಟರ್ಪಾಲು ಹಾಕಿ ಗಟ್ಟಿಗೊಳಿಸಿದ್ದಾರೆ. ಮತ್ತಷ್ಟು ಜೋರು ಮಳೆ ಬಂದರೆ ಈ ಪ್ರದೇಶವೂ ಯಾವಾಗ ಬೇಕಿದ್ದರೂ ಕುಸಿಯುವ ಸಾಧ್ಯತೆಗಳಿವೆ.
ಸುಮಾರು15 ವರ್ಷದ ಹಿಂದೆ ಅಬ್ದುಲ್ ಮಜೀದ್ ಅವರ ಮನೆ ಮುಂಭಾಗದ ಪಾರ್ಶ್ವವು ಕುಸಿದಿದ್ದು, ಆಗ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿತ್ತು. ಅಂದು ಗ್ರಾ. ಪಂ. ಪ್ರತಿನಿಧಿಗಳು ಬಂದು ನೋಡಿ ಹೋಗಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರ ಕಾರ್ಯಾಚರಣೆ ನಡೆಸಿಲ್ಲ. ಈಗ ಮತ್ತೆ ಇನ್ನೊಂದು ಪಾರ್ಶ್ವದ ದಂಡೆ ಕುಸಿದಿದೆ. ವಿಷಯ ತಿಳಿದ ಕೂಡಲೇ ಪುರಸಭೆ ಸದಸ್ಯ ಅರುಣ್ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ ಅವರು ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಸ್ಥಳೀಯ ನಿವಾಸಿ ಇಮ್ತಿಯಾಜ್ ಅಹಮದ್ ಹೇಳಿದ್ದಾರೆ.
ಪುರಸಭೆ ವ್ಯಾಪ್ತಿಯ ಕೊಂಬಗುಡ್ಡೆ ವಾರ್ಡ್‌ನಲ್ಲಿರುವ ಜಿದ್ದಿ ಖೇಡ್ ಕೆರೆಯ ದಂಡೆ ಕುಸಿತಕ್ಕೊಳಗಾಗಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ದಂಡೆಯಲ್ಲಿರುವ ಮೂರು ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಕೆರೆಯನ್ನು ಕ್ರಿಯಾಯೋಜನೆಯಡಿ ಸೇರಿಸಿ ಅಭಿವೃದ್ಧಿ ಮಾಡುತ್ತೇವೆ. ಮಾತ್ರವಲ್ಲದೇ ಮನೆಯವರಿಗೆ ಅಪಾಯವಾಗದ ರೀತಿಯಲ್ಲಿ ಭದ್ರವಾದ ದಂಡೆ ನಿರ್ಮಾಣಕ್ಕೂ ಯೋಜನೆ ರೂಪಿಸುವುದಾಗಿ ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ಭರವಸೆ ನೀಡಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ನನ್ನ ಅಣ್ಣನ ಮಗ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿತ್ತು. ಆ ಬಳಿಕ 20 ವರ್ಷಗಳ ಹಿಂದೆ ಕೊಕ್ಕರೆ ಬೇಟೆಗೆಂದು ಬಂದಿದ್ದ ವ್ಯಕ್ತಿಯೋರ್ವ ಕೆರೆಯ ಬಗ್ಗೆ ಅರಿವಿರದೇ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಆಗ ಅವರನ್ನು ನಾವು ರಕ್ಷಿಸಿದ್ದೆವು. ಈ ಎರಡೂ ಘಟನೆಗಳು ನಮ್ಮ ಕಣ್ಣಮುಂದೆಯೇ ಇರುವಂತೆಯೇ ಕೆರೆಯ ದಂಡೆ ಕುಸಿತಕ್ಕೊಳಗಾಗಿರುವುದು ನಮ್ಮಲ್ಲಿ ಆತಂಕ ಮೂಡಿಸಿದೆ ಎನ್ನುತ್ತಾರೆ ಅಕ್ಬರ್ ಅವರು.