Advertisement

ಕಪ್ಪುಪಟ್ಟಿ ಪ್ರದರ್ಶಿಸಿ ಭೂಮಾಪಕರ ಪ್ರತಿಭಟನೆ

09:34 PM Aug 19, 2019 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ವಿಲೇವಾರಿಗೆ ನಿಗದಿಪಡಿಸಿ ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆದು ಮಾಸಿಕ 23 ಕಡತಗಳ ವಿಲೇವಾರಿ ನಿಗದಿಪಡಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲೆಯ ಭೂ ಮಾಪಕರು ಕಪ್ಪು ಪಟ್ಟಿ ಪ್ರದರ್ಶಿಸಿ ಜಿಲ್ಲಾಡಳಿತ ಭವನದ ತಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಕಪ್ಪುಪಟ್ಟಿ ಪ್ರದರ್ಶಿಸಿ ಘೋಷಣೆ: ರಾಜ್ಯ ಭೂ ಮಾಪಕರ, ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಸದಸ್ಯರು ಜಿಲ್ಲಾಡಳಿತ ಭವನದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಪ್ಪುಪಟ್ಟಿ ಪ್ರದರ್ಶಿಸಿ ಘೋಷಣೆ ಕೂಗುವ ಮೂಲಕ ಗಮನ ಸೆಳೆದರು.

ಸರ್ಕಾರ 30 ಕಡತಗಳ ವಿಲೇವಾರಿ ಬದಲು 23 ಕಡತಗಳ ಗುರಿ ನಿಗದಿಪಡಿಸಿ ಸರ್ಕಾರಿ ರಜೆ ಹಾಗೂ ನೌಕರರ ವೈಯಕ್ತಿಕ ರಜೆಗಳನ್ನು ಪರಿಗಣಿಸಿ ಕಡತಗಳ ವಿಲೇವಾರಿಗೆ ಗುರಿ ನಿಗದಿಪಡಿಸಬೇಕು. ಇಲಾಖೆಯಲ್ಲಿ ನಡೆಯುತ್ತಿರುವ ಹೊರಗುತ್ತಿಗೆ ಬಾಂದು ಸಹಾಯಕರ ನೇಮಕಾತಿ ಕೈಬಿಟ್ಟು ಭೂಮಾಪಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಬಾಂದು ಜವಾನರ ಕಾಯಂ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಒತ್ತಾಯಿಸಿದರು.

ಇಲಾಖೆಯ ಕಚೇರಿಯಲ್ಲಿ ಸುಗಮ ಆಡಳಿತಕ್ಕೆ ಅನುವಾಗುವಂತೆ ಫಿಲ್ಡ್‌ ಭೂಮಾಪಕರನ್ನು ನಿಯೋಜಿಸಬೇಕು, ಮೋಜಿಣಿ ಸರ್ವರ್‌ನ್ನು ಕಚೇರಿಯ ಅವಧಿಯಾದ ಬೆಳಗ್ಗೆ 10:30ರಿಂದ ಸಂಜೆ 5:30ರ ವರೆಗೂ ಮಾತ್ರ ಚಾಲನೆಯಲ್ಲಿಟ್ಟು ಉಳಿದ ಅವಧಿಯಲ್ಲಿ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾನಿತ ಭೂ ಮಾಪಕರು ಪ್ರತಿಭಟನೆ ನಡೆಸಿದರು.

ಮಲತಾಯಿ ಧೋರಣೆಗೆ ಆಕ್ರೋಶ: ಈ ಸಂದರ್ಭದಲ್ಲಿ ಮಾತನಾಡಿದ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಆನಂದ್‌, ರಾಜ್ಯ ಸರ್ಕಾರ ಭೂ ಮಾಪಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಭೂಮಾಪಕ ಕೆಲಸ ಕಾರ್ಯಗಳಿಂದ ಕಂದಾಯ ಇಲಾಖೆಗೆ ಉತ್ತಮ ಹೆಸರು ಬಂದಿದೆ. ವಿಶೇಷವಾಗಿ ಪೋಡಿ ಮುಕ್ತ ಅಭಿಯಾನದಲ್ಲಿ ಭೂ ಮಾಪಕರ ಸೇವೆ ಅನನ್ಯವಾದದ್ದು. ಆದರೆ ಸರ್ಕಾರ ಅವೈಜ್ಞಾನಿಕವಾಗಿ ಮಾಸಿಕ 30 ಕಡತಗಳ ವಿಲೇವಾರಿಗೆ ಸೂಚಿಸಿದೆ.

Advertisement

ಆದರೆ ಭೂ ಮಾಪಕರ ಮೂಲ ಸೌಕರ್ಯ, ವೇತನ ವಿಚಾರದಲ್ಲಿ ಮೃದುಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಖಾಲಿ ಇರುವ ಕಾರ್ಯನಿರ್ವಾಹಕ ಹುದ್ದೆಗಳಿಗೆ ಮುಂಬಡ್ತಿ ನೀಡಿ ಭರ್ತಿ ಮಾಡಬೇಕು, ಮಾಸಿಕ ನೀಡುವ 600 ರೂ. ಪ್ರಯಾಣ ಭತ್ಯೆಯನ್ನು 2000ಕ್ಕೆ ಹೆಚ್ಚಿಸಬೇಕು. ರ್‍ಯಾಂಕಿಂಗ್‌ ಆಧಾರದಲ್ಲಿ ನೌಕರರ ವರ್ಗಾವಣೆ ಪ್ರಕ್ರಿಯೆ ಕೈ ಬಿಡಬೇಕೆಂದರು.

ಪ್ರತಿಭಟನೆಯಲ್ಲಿ ರಾಜ್ಯ ಭೂ ಮಾಪಕರ, ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯರಾದ ಬಿ.ವಿ.ಹನುಮಂತರಾಯಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್‌, ಪದಾಧಿಕಾರಿಗಳಾದ ಶಾಂತಪ್ಪ, ಕಲ್ಲೇಶ್‌, ಸುರೇಶ್‌, ಪೂಜಾ, ಪದ್ಮಾ, ತ್ರಿವೇಣಿ, ಕೆ.ಗಿರೀಶ್‌, ಚಂದ್ರಶೇಖರ್‌, ನಾರಾಯಣಸ್ವಾಮಿ, ಜೀನತ್‌ಉನ್ನೀಸ್‌ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭೂ ಮಾಪಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸೆ.4ಕ್ಕೆ ಬೆಂಗಳೂರು ಚಲೋ: ರಾಜ್ಯ ಸರ್ಕಾರ ಭೂ ಮಾಪಕರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸೆ.4 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾ ನಿರತ ಭೂಮಾಪಕರು ಎಚ್ಚರಿಸಿದರು.

ಹಲವು ವರ್ಷಗಳಿಂದ ಭೂಮಾಪಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ, ಧರಣಿ ನಡೆಸುತ್ತಿದ್ದರೂ ಸರ್ಕಾರಗಳು ಗಮನ ಕೊಡುತ್ತಿಲ್ಲ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಬೇಕು. ಪ್ರಮುಖ ಬೇಡಿಕೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ ಭೂ ಮಾಪಕರು ಸೆ.4 ರ ವರೆಗೂ ಕಪ್ಪುಪಟ್ಟಿ ಧರಿಸಿಯೇ ನಾವು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಆನಂದ್‌ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next