ವಿಜಯಪುರ: ಭಾರತ ವಿಶ್ವ ಗುರುವಾಗಬೇಕಾದರೆ ಭಾರತೀಯ ಪ್ರಜೆಗಳೆಲ್ಲ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ನಮ್ಮ ಧ್ಯೇಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಗ್ಯಾಂಗ್‌ಬಾವಡಿ ಪ್ರದೇಶದ ಎನ್ ಇಕೆಆರ್‌ಟಿಸಿ ಡಿಪೊ ಬಳಿ ಬಿಜೆಪಿ ವಿಜಯಪುರ ಜಿಲ್ಲಾ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ನಾಯಕರ ಮಹತ್ತರ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿದೆ. ಮೋದಿ ಆಡಳಿತದಲ್ಲಿ ಭಾರತ ಈ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇರಿಸಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಅನ್ಯ ಜಿಲ್ಲೆಯಿಂದ ಬಂದು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನನ್ನನ್ನು ಜಿಲ್ಲೆಯ ಜನರು ಸಹೋದರಿಯಂತೆ ಸ್ವೀಕರಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಲು ಹಾಗೂ ಸರ್ಕಾರದ ಎಲ್ಲ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯ ಕಚೇರಿ ಎಂದರೆ ಅದೊಂದು ಭಾವನಾತ್ಮಕ ಶ್ರದ್ಧಾ ಕೇಂದ್ರವಾಗಿದೆ. ಕೇವಲ ಇಟ್ಟಿಗೆ, ಮರಳು ಸಿಮೆಂಟ್ ಮಿಶ್ರಿತ ಜಡ ಗೋಡೆಗಳಿಂದಾದ ಆಸರೆ ಮಾತ್ರವಲ್ಲದೆ ಅವರ ಭಾವನೆಗಳ ದೇವಾಲಯದ ದೇವ ಮಂದಿರ ಎನ್ನುವ ಭಾವನೆ ನಮ್ಮದು ಎಂದರು.
ಬಿಜೆಪಿ ಕಾರ್ಯಾಲಯ ಕಾರ್ಯಕರ್ತನ ಹೃದಯ ಮತ್ತು ಮನಸ್ಸುಗಳನ್ನು ಒಂದಾಗಿಸುವ ಅವನ ಮಸ್ತಕಕ್ಕೆ ಆಹಾರ ನೀಡುವ ಚಿಂತನಾ ಕೇಂದ್ರವಾಗಿದೆ. ಕಾರ್ಯಕರ್ತರ ತೆರೆದ ಕಣ್ಣು ಕಿವಿಗಳಿಗೆ ಆಹ್ಲಾದಕರ ನಾಯಕತ್ವದ ಮಾರ್ಗದರ್ಶನ ನಿಡುವ ಕೇಂದ್ರವಾಗಲಿದೆ. ಇದರ ನಿರ್ಮಾಣಕ್ಕಾಗಿ ತಗುಲುವ ವೆಚ್ಚವನ್ನು ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜಿಲ್ಲಾ ಕಾರ್ಯಾಲಯ ಕಟ್ಟಡ ನಿಧಿ ಅರ್ಪಣೆ ಮೂಲಕ ಸಂಗ್ರಹಿಸುತ್ತಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಪಕ್ಷದ ಕಚೇರಿ ನಿರ್ಮಾಣದ ಭೌತಿಕ ಸ್ವರೂಪವನ್ನು ವಿವರಿಸಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್. ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಪಕ್ಷ ಪ್ರಮುಖರಾದ ಪ್ರಕಾಶ ಅಕ್ಕಲಕೋಟ, ಭೀಮಾಶಂಕರ ಹದನೂರು, ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ,ಗೂಳಪ್ಪ ಶೆಟಗಾರ, ಮಲ್ಲಿಕಾರ್ಜುನ ಜೋಗುರ, ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ ಇತರರು ಇದ್ದರು.