Advertisement
ಮುಂಜಾನೆ 7.45ರ ಸುಮಾರಿಗೆ ಮಡಿಕೇರಿ, ಮುಕ್ಕೋಡ್ಲು, ನಾಪೋಕ್ಲು, ಬಲ್ಲಮಾವಟಿ, ಭಾಗಮಂಡಲ, ಕರಿಕೆ, ಕಲ್ಲುಗುಂಡಿ, ಸಂಪಾಜೆ ಸಮೀಪದ ದಬ್ಬಡ್ಕ, ಪೆರಾಜೆ, ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಗುಳಿಕ್ಕಾನ ಹರಿಹರ, ಬಾಳುಗೋಡು, ಐನೆಕಿದು, ಗುತ್ತಿಗಾರು, ನಾಲ್ಕೂರು, ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆ, ಮರ್ಕಂಜ, ಅರಂತೋಡು, ಗೂನಡ್ಕ, ಅಡ್ಯಡ್ಕ, ತೊಡಿಕಾನ, ಆಲೆಟ್ಟಿ, ಮರ್ಕಂಜ, ಕಾಸರಗೋಡು ಜಿಲ್ಲೆಯ ಗಡಿಪ್ರದೇಶವಾದ ಬಂದಡ್ಕ, ಪನತ್ತಡಿ, ಕೊನ್ನಕ್ಕಾಡು, ಮೂನಾಂಕಡವು ಪರಿಸರದಲ್ಲಿ ಕ್ಷಣಕಾಲ ಭೂಮಿ ಕಂಪಿಸಿದ್ದು ಮನೆಗಳಲ್ಲಿ ಪಾತ್ರೆಗಳು, ರೂಫಿಂಗ್ ಶೀಟ್, ಪೀಠೊಪಕರಣಗಳು ಅಲುಗಾಡಿದ ಅನುಭವವಾಗಿದೆ.
ಕೊಡಗು-ದ.ಕ. ಜಿಲ್ಲೆಗಳ ಗಡಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ. ವಾಯವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳ ದ ಲ್ಲಿತ್ತು. ರಿಕ್ಟರ್ ಮಾಪಕದಲ್ಲಿ 3.0ಯಷ್ಟು ಕಂಪನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
Related Articles
Advertisement
ವಾರದಲ್ಲಿ 3 ಬಾರಿ ಕಂಪನಕೊಡಗಿನ ವಿವಿಧೆಡೆ ಜೂ. 23ರಂದು ಬೆಳಗ್ಗೆ 4 ಗಂಟೆ 37 ನಿಮಿಷ 21 ಸೆಕೆಂಡ್‌ಗೆ ಮತ್ತು ಜೂ. 25ರಂದು ಬೆಳಗ್ಗೆ 9 ಮತ್ತು 9.10 ಗಂಟೆಯ ನಡುವೆ ಭೂಕಂಪನವಾಗಿತ್ತು. ಜೂ. 28ರಂದು ಮತ್ತೆ ಕಂಪಿಸಿದೆ. ವಾರದಲ್ಲಿ ಮೂರು ಬಾರಿ ಅನುಭವವಾಗಿರುವುದರಿಂದ ಜನರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಅಧಿಕಾರಿಗಳಿಂದ ಪರಿಶೀಲನೆ
ಸುಳ್ಯ ಪರಿಸರದಲ್ಲಿ ಜೂ. 25ರಂದು ಬೆಳಗ್ಗೆ 9.10ರ ವೇಳೆಗೆ 4-5 ಸೆಕೆಂಡ್ ಭೂಮಿ ಕಂಪಿಸಿತ್ತು. ಅಂದು ಕರಿಕೆ ಸಮೀಪ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆ ದಾಖ ಲಾಗಿತ್ತು. ಜೂ. 28ರಂದು ಸಂಭವಿ ಸಿದ ಭೂ ಕಂಪನದ ತೀವ್ರತೆ 3.0 ದಾಖಲಾಗಿದೆ. ಮುಂದೆ ಮಳೆಗಾಲ ತೀವ್ರಗೊಂಡಾಗ ಅಪಾಯ ಸಂಭವಿಸ ಬಹುದೇ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆತಂಕ ಸೃಷ್ಟಿಯಾ ಗಿರುವ ಸಂಪಾಜೆಗೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪಿ.ಆರ್. ನಾಗೇಶ್, ಗೂನಡ್ಕದ ಅಬೂಸಾಲಿ, ಅಬ್ಟಾಸ್ ಅವರ ಮನೆಗಳು ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿದರು. ಸುಳ್ಯ ಎಸ್‌ಐ ಜಿ.ಆರ್. ದಿಲೀಪ್, ಪಿಡಿಒ ಸರಿತಾ ಡಿ’ಸೋಜಾ, ವಿಎ ಮಿಯಾಸಾಬ್ ಮುಲ್ಲಾ ಜತೆಗಿದ್ದರು. ದೃಶ್ಯ ವೈರಲ್
ಕಲ್ಲುಗುಂಡಿಯ ಚಟ್ಟೆಕಲ್ಲಿನ ಮನೆಯಲ್ಲಿ ಅಳವಡಿಸಿರುವ ಸಿಸಿ ಕೆಮರಾದಲ್ಲಿ ಭೂ ಕಂಪನ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ. ಮೊದಲಿಗೆ ವಿಮಾನ ಹೋದಂತ ಶಬ್ದ ಕೇಳಿಸಿತು. ಅದರ ಬೆನ್ನಲ್ಲೇ ಭೂಮಿ ಅದುರಿದ ಅನುಭವ ಆಗಿದೆ. ಮನೆಯವರೆಲ್ಲ ಹೆದರಿ ಹೊರಗೆ ಬಂದೆವು. ಕಂಪನ ನಿಂತ ವೇಳೆ ಮತ್ತೂಮ್ಮೆ ಶಬ್ದ ಕೇಳಿಸಿತು ಎಂದು ಕಲ್ಮಕಾರು ಗ್ರಾಮದ ದೀಪಕ್ ಗುಳಿಕಾನ ಅನುಭವವನ್ನು ಉದಯವಾಣಿ ಜತೆ ಹಂಚಿಕೊಂಡರು. ಯಾವ ಕಾರಣಕ್ಕೆ ಭೂಮಿ ಕಂಪಿಸಿದೆ ಎಂದು ಈಗಲೇ ಹೇಳುವುದು ಕಷ್ಟ. ವಿವಿಧ ಕಾರಣಗಳಿಂದ ಭೂಮಿ ಕಂಪಿಸಿರುವ ಸಾಧ್ಯತೆಗಳಿರುತ್ತವೆ. ಸದ್ಯದ ಕಂಪನ ಆತಂಕಕಾರಿಯಲ್ಲ ಎಂದು ಕಿರಿಯ ಭೂ ವಿಜ್ಞಾನಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಸಂಜೆ ಮತ್ತೆ ಕಂಪನ
ಅರಂತೋಡು: ಕಲ್ಲುಗುಂಡಿ, ಗೂನಡ್ಕ, ಸಂಪಾಜೆ, ತೊಡಿಕಾನ, ಅರಂತೋಡು ಭಾಗದಲ್ಲಿ ಸಂಜೆ 4.32ರ ವೇಳೆಗೆ ಮತ್ತೆ ಭೂಮಿ ಕಂಪಿಸಿದೆ. ಕೊಡಗಿನ ಚೆಂಬು ಕೇಂದ್ರ ಸ್ಥಾನವಾಗಿದ್ದು, ಕಂಪನದ ತೀವ್ರ ರಿಕ್ಟರ್ ಮಾಪಕದಲ್ಲಿ 1.8 ದಾಖಲಾಗಿದೆ ಎಂದು ತಿಳಿದುಬಂದಿದೆ. ಸಂಪಾಜೆ ಗ್ರಾಮದ ಶಂಕರ ಪ್ರಸಾದ ರೈ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ. ವಸತಿ ವ್ಯವಸ್ಥೆ
ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಕಂಪನ ಮುನ್ಸೂಚನೆ ಸಿಕ್ಕಾಗ ಜನರು ಭೀತರಾಗದೆ ಮನೆಯಿಂದ ಹೊರಗೆ ಬನ್ನಿ. ಮನೆಗೆ ಹಾನಿಯಾದ ತುರ್ತು ಸಂದರ್ಭದಲ್ಲಿ ಕಲ್ಲುಗುಂಡಿ ಸ.ಹಿ.ಪ್ರಾ. ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು /ಸದಸ್ಯರು ಪಿಡಿಒ/ಗ್ರಾಮ ಲೆಕ್ಕಾಧಿಕಾರಿಯವರನ್ನು ಸಂಪರ್ಕಿಸುವಂತೆ ಪಿಡಿಒ ತಿಳಿಸಿದ್ದಾರೆ. ಗೋಡೆಗಳಲ್ಲಿ ಬಿರುಕು
ಸಂಪಾಜೆಯ ಸಮೀಪ ಗೂನಡ್ಕದ ಕೆಲವು ಮನೆಗಳ ಗೋಡೆಗಳಲ್ಲಿ ಸಣ್ಣ ಬಿರುಕುಗಳು ಮೂಡಿವೆ. ವೀರಾಜಪೇಟೆಯ ತೋರ ಹಾಗೂ ಕೆದಮುಳ್ಳೂರು ಗ್ರಾಮಗಳಲ್ಲಿ ಭೂಮಿಯೊಳಗಿಂದ ಶಬ್ದ ಕೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮುಂಜಾಗ್ರತೆಯೇ ಪರಿಹಾರ
ಭೂಮಿಯೊಳಗಿನ ಒತ್ತಡಗಳು ಸ್ಫೋಟಗೊಂಡು ಪದರಗಳು ಅಲುಗಾಡಿದಾಗ ಭೂಕಂಪನ ಸಂಭವಿಸುತ್ತದೆ. ಇದನ್ನು ತಡೆಯಲು ಅಥವಾ ಊಹಿಸಲು ಆಗುವುದಿಲ್ಲ. ಮುಂಜಾಗ್ರತೆಯೊಂದೇ ಪರಿಹಾರ. ಭೂಕಂಪನ ಹಾನಿಯ 3ನೇ ವಲಯದಲ್ಲಿ ಬರುವ ಜಿಲ್ಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನಿಗದಿಪಡಿಸಲಾದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
– ಡಾ| ಜಿ.ಎಸ್. ಶ್ರೀನಿವಾಸ ರೆಡ್ಡಿ ,
ನಿವೃತ್ತ ನಿರ್ದೇಶಕರು, ಕೆಎಸ್‌ಎನ್‌ಎಂಡಿಸಿ ತೀವ್ರತೆಯ ಭೀತಿ ಇಲ್ಲ
ದಕ್ಷಿಣ ಕನ್ನಡ, ಕೊಡಗು, ಹೊಳೆನರಸೀಪುರ ಮತ್ತಿತರ ಕಡೆ ಇತ್ತೀಚೆಗೆ ಲಘು ಭೂಕಂಪನಗಳು ಆಗುತ್ತಿರುವುದಕ್ಕೆ ಭೂಮಿಯೊಳಗಿನ ಹಳೆಯ ಬಿರುಕುಗಳಲ್ಲಿ ಚಲನೆ ಉಂಟಾಗಿರುವುದು ಕಾರಣ. ಬಿರುಕುಗಳಲ್ಲಿನ ಚಲನೆ ಸ್ಥಿರತೆ ಪಡೆದುಕೊಳ್ಳಲು ಸಮಯ ಬೇಕು. ಚಲನೆ ಮತ್ತು ಸ್ಥಿರತೆಯ ನಡುವಿನ ಸಮಯದಲ್ಲಿ ಆಗಾಗ ಕಂಪನದ ಅನುಭವವಾಗುತ್ತದೆ. ಹೆಚ್ಚು ತೀವ್ರತೆ ಇರುವುದಿಲ್ಲ.
– ಡಾ| ಬಿ.ಸಿ. ಪ್ರಭಾಕರ್,
ಭೂಕಂಪನಶಾಸ್ತ್ರಜ್ಞರು ಆತಂಕ ಬೇಡ; ತಜ್ಞರಿಂದ ವರದಿ: ಅಂಗಾರ
ಮಂಗಳೂರು: ಸುಳ್ಯ ಪರಿಸರದಲ್ಲಿ ಲಘು ಭೂ ಕಂಪನ ಆಗಿರುವ ಹಿನ್ನೆಲೆಯಲ್ಲಿ ತತ್‌ಕ್ಷಣ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೂಚಿಸಲಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ತಿಳಿಸಲಾಗಿದೆ. ಜಿಲ್ಲಾಡಳಿತ ಕೂಡ ಮುಂಜಾಗ್ರತೆ ವಹಿಸಲು ಸನ್ನದ್ಧವಾಗಿದೆ. ಜನರು ಆತಂಕಕ್ಕೆ ಒಳಗಾಗುವ ಆವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಹರಡುತ್ತಿರುವ ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಅವರು ತಿಳಿಸಿದರು. ಸಹಾಯವಾಣಿ
ಭೂಕಂಪದ ಅನುಭವವಾದರೆ ಹಾಗೂ ಭೂಮಿಯಲ್ಲಿ ಬಿರುಕುಗಳು ಕಂಡು ಬಂದರೆ ಕೊಡಗು ಜಿಲ್ಲೆಯ ವಿಪತ್ತು ನಿರ್ವಹಣ ಕೇಂದ್ರ (08272-221077, 221099)ಕ್ಕೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ. ಭೂ ಕಂಪನ ಪ್ರದೇಶ ಪರಿಶೀಲನೆಗೆ ತಂಡ
ಮಂಗಳೂರು: ಲಘು ಭೂ ಕಂಪನ ಉಂಟಾದ ಪ್ರದೇಶಗಳ ಪರಿಶೀಲನೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಭೂಕಂಪನ ಶಾಸ್ತ್ರಜ್ಞ ಜಗದೀಶ್ ಮತ್ತು ಅವರ ತಂಡವನ್ನು ನಿಯೋಜಿಸಲಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.