Advertisement

ಭೂ ತಾಪಮಾನ ನಿಯಂತ್ರಣ: ವಿಶ್ವ ಸಮುದಾಯ ಕೈಜೋಡಿಸಲಿ

10:33 PM Aug 10, 2021 | Team Udayavani |

ಪರಿಸರ ನಾಶ, ಹೆಚ್ಚುತ್ತಿರುವ ಕೈಗಾರಿಕೆಗಳು, ವಾಹನಗಳ ಹೆಚ್ಚಳ ಇವೇ ಮೊದಲಾದ ಕಾರಣಗಳಿಂದಾಗಿ ಭೂಮಿಯ ತಾಪಮಾನ ನಿರಂತರವಾಗಿ ಹೆಚ್ಚುತ್ತಲೇ ಸಾಗಿದೆ. ತಾಪಮಾನ ಹೆಚ್ಚಳದ ಪರಿಣಾಮ ಇಡೀ ವಿಶ್ವದ ಒಂದಲ್ಲ ಒಂದು ಪ್ರದೇಶದಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಯಾಗುತ್ತಿದೆ­ಯ­ಲ್ಲದೆ ಪ್ರಾಕೃತಿಕ ದುರಂತಗಳು ನಿತ್ಯ ನಿರಂತರವಾಗುತ್ತಿವೆ. ಏರುತ್ತಿರುವ ತಾಪಮಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ನೆಲೆಯಲ್ಲಿ ಕಳೆ ದೊಂದು ದಶಕದ ಅವಧಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಬಂದಿವೆ­ಯಾ­ದರೂ ಇವು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸಫ‌ಲವಾಗಿಲ್ಲ.

Advertisement

ಜನಸಂಖ್ಯೆ ಹೆಚ್ಚಿದಂತೆ ಪ್ರಕೃತಿಯ ಮೇಲೆ ಮಾನವ ದೌರ್ಜನ್ಯಗಳು ಅಧಿಕಗೊಂಡಿದ್ದು, ಸಹಜ ಪರಿಸರ ವ್ಯವಸ್ಥೆಯ ಅಡಿಪಾಯ ಅಲುಗಾಡ­ತೊಡಗಿದೆ. ಇದರ ಪರಿಣಾಮವಾಗಿ ನೈಸರ್ಗಿಕ ವಿಕೋಪಗಳು ಸಂಭವಿ­ಸುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜೀವ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ವಿಶ್ವಸಂಸ್ಥೆಯ ಅಂತರ್‌ ಸರಕಾರಿ ಹವಾಮಾನ ಬದಲಾವಣೆ ಸಮಿತಿ ಪ್ರಕಟಿಸಿರುವ ತನ್ನ 6ನೇ ಮೌಲ್ಯಮಾಪನ ವರದಿಯಲ್ಲಿ ಮಾನವ ಪ್ರಕೃತಿಯ ಮೇಲಣ ದೌರ್ಜನ್ಯಗಳನ್ನು ಕಡಿಮೆಗೊಳಿಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಹವಾಮಾನ ಬದಲಾವಣೆಯ ದುಷ್ಪರಿಣಾಮ ಇನ್ನಷ್ಟು ಹೆಚ್ಚಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಈ ವರದಿಯ ಪ್ರಕಾರ ಸದ್ಯ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಭೂ ತಾಪಮಾನ ಹೆಚ್ಚಾಗಿದ್ದು ಈ ಕಾರಣದಿಂದಾಗಿಯೇ ಪ್ರವಾಹ, ಅನಾವೃಷ್ಟಿ, ಭೂಕುಸಿತ, ಚಂಡಮಾರುತ, ಕಡಲ್ಕೊರೆತ, ಮೇಘಸ್ಫೋಟ, ಹಿಮನದಿಗಳ ಕರಗುವಿಕೆ ಇವೇ ಮೊದಲಾದ ಸಮಸ್ಯೆಗಳು ಅಧಿಕವಾಗಿವೆ. ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದಾಗಿ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಹಿಮ ಕರಗುವಿಕೆ ಪ್ರಮಾಣ ಹೆಚ್ಚಾಗಿದೆ. ಭೂಮಿಯಲ್ಲಿ ಬಿಸಿಲ ಝಳ ಹೆಚ್ಚಾಗುತ್ತಲೇ ಸಾಗಿದ್ದು ಚಳಿಯ ವಾತಾವರಣ ಕಡಿಮೆಯಾಗತೊಡಗಿದೆ. ಹವಾಮಾನ ಬದಲಾವಣೆಯ ಪರಿಣಾಮ ಸಮುದ್ರದ ನೀರಿನ ಮಟ್ಟ ಏರಿಕೆಯಾಗಲಿದ್ದು ಕಡಲತಡಿಯ ಪ್ರದೇಶಗಳನ್ನು ಸಮುದ್ರ ನಿಧಾನವಾಗಿ ತನ್ನ ಒಡಲಿಗೆ ಸೇರಿಸಿಕೊಳ್ಳಲಿದೆ. ಇಷ್ಟು ಮಾತ್ರವಲ್ಲದೆ ಈಗಾಗಲೇ ಅಕಾಲಿಕ ಮಳೆ, ಉಷ್ಣಹವೆಯಂಥ ದುಷ್ಪರಿಣಾಮಗಳನ್ನು ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳು ಎದುರಿಸುತ್ತಿವೆ.

ತಾಪಮಾನ ಹೆಚ್ಚಳದ ಪರಿಣಾಮ ಕೇವಲ ಪ್ರಾಕೃತಿಕ ದುರಂತಗಳಿಗೆ ಮಾತ್ರ ಸೀಮಿತವಾಗದೆ ಮಾನವನ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಒಂದೆಡೆಯಿಂದ ನೆರೆ, ಬರಗಳಿಂದಾಗಿ ಆಹಾರ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಭೂಮಿ ಮತ್ತು ಸಾಗರದಲ್ಲಿನ ಇಡೀ ಜೀವ ಸಂಕುಲದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತಂತೆ ಚರ್ಚೆಗಳು ಆರಂಭವಾಗಿ ದಶಕಗಳೇ ಕಳೆದಿದ್ದರೂ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಾಗತಿಕ ಸಮುದಾಯ ವಿಫ‌ಲವಾಗಿದೆ. ಮಾನವರು ಸಹಜ ಪರಿಸರದ ವಿರುದ್ಧ ನಡೆಯದೆ, ಪರಿಸರ ಸಹ್ಯ ಬದುಕನ್ನು ತಮ್ಮದಾಗಿಸಿಕೊಂಡರೆ ಮಾತ್ರವೇ ಭೂ ತಾಪಮಾನದ ನಿಯಂತ್ರಣ ಸಾಧ್ಯ. ಮಾನವ, ಎಲ್ಲವನ್ನೂ ವಾಣಿಜ್ಯ ದೃಷ್ಟಿಕೋನದಿಂದ ನೋಡುವ ತನ್ನ ಪರಿಪಾಠವನ್ನು ಕಡಿಮೆ ಮಾಡಿ ಇಡೀ ಭೂಮಿಯ ಒಳಿತನ್ನು ಗಮನದಲ್ಲಿರಿಸಿ ಚಿಂತನೆ ನಡೆಸಬೇಕಾದುದು ಅನಿವಾರ್ಯ­. ಈ ವಿಚಾರದಲ್ಲಿ ವಿಶ್ವ ಸಮುದಾಯ ಪರಸ್ಪರ ಕೈಜೋಡಿಸಿದಲ್ಲಿ ಭೂ ತಾಪಮಾನವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next