ಕೊಡಗು: ಜಿಲ್ಲೆಯ ಪ್ರಸಿದ್ದ ಕಾವೇರಿ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂರ್ಣ ಮಣ್ಣುಪಾಲಾಗಿದ್ದು, ಕ್ಷೇತ್ರದ ಅರ್ಚಕರು ಕುಟುಂಬ ಮಣ್ಣಿನಡಿ ಸಿಲುಕಿದ್ದಾರೆ.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ, ಸೋದರ ಆನಂದತೀರ್ಥ ಮತ್ತು ಇಬ್ಬರು ಅರ್ಚಕರು ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಬೆಟ್ಟಸಾಲಿನಲ್ಲಿ ಸುಮಾರು 6 ಕಿ.ಮೀ. ಉದ್ದಕ್ಕೆ ಭೂ ಕುಸಿತವಾಗಿದೆ. ಎರಡು ಮನೆಗಳ ಎರಡು ಕಾರು, 20ಕ್ಕೂ ಹೆಚ್ಚು ಹಸುಗಳು ಮಣ್ಣುಪಾಲಾಗಿದೆ ಎಂದು ವರದಿಯಾಗಿದೆ.
ಮಂಜು, ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಭಾಗಮಂಡಲ – ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತವಾದ ಕಾರಣ ರಕ್ಷಣಾ ಕಾರ್ಯಪಡೆಯ ವಾಹನಗಳು ಸ್ಥಳಕ್ಕೆ ತೆರಳಲು ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ.