Advertisement
ಹಳೆಯಂಗಡಿ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ಇಲ್ಲಿನ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡವು ಮಂಗಳವಾರ ಜರಿದಿದೆ. ಅಪಾಯದ ಅಂಚಿನಲ್ಲಿದ್ದ ಕುಡಿಯುವ ನೀರಿನ ಟ್ಯಾಂಕಿಯನ್ನು ತೆರವುಗೊಳಿಸಲಾಗಿದೆ. ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಪಡುಪಣಂಬೂರು ಸರಕಾರಿ ಶಾಲೆಯ ಬಳಿ ಗುಡ್ಡವನ್ನು ಅಗೆಯಲಾಗಿತ್ತು. ಆ ಸಂದರ್ಭದಲ್ಲಿ ಗುಡ್ಡದ ಇಳಿ ಜಾರಿಗೆ ಕಬ್ಬಿಣದ ಜಾಲರಿ ಅಳವಡಿಸಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಲಾಗಿತ್ತು. ಆದರೆ ಮಳೆಯ ಬಿರುಸು ಹೆಚ್ಚಾದಾಗ ಮಣ್ಣು ಬಿರುಕು ಬಿಡಲಾರಂಭಿಸಿದ್ದು, ಮಂಗಳವಾರ ಮುಂಜಾನೆಯಿಂದ ಜರಿಯಲಾರಂಭಿಸಿ ಗುಡ್ಡದ ಮೇಲಿರುವ ಟ್ಯಾಂಕಿ, ನೀರಿನ ಸಂಪು ಹಾಗೂ ಶಾಲೆಯ ನಾಲ್ಕು ಕೊಠಡಿಗಳು ಅಪಾಯಕ್ಕೆ ಸಿಲುಕಿದವು.
ಹೆದ್ದಾರಿ ಕಾಮಗಾರಿ ನಡೆಸಿದ್ದ ನವಯುಗ್ ಕನ್‌ಸ್ಟ್ರಕ್ಷನ್‌ನ ಯೋಜನಾ ಪ್ರಬಂಧಕ ಶಂಕರ್ ಹಾಗೂ ಅವರ ಸಿಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ, ಕ್ರೇನ್ ಮೂಲಕ ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಕುಡಿಯುವ ನೀರಿನ ಟ್ಯಾಂಕಿಯನ್ನು ನೆಲಸಮ ಮಾಡುವ ಮೂಲಕ ಅಪಾಯವನ್ನು ತಪ್ಪಿಸಿದರು. ಜಿ.ಪಂ. ಸದಸ್ಯ ವಿನೋದ್ ಸಾಲ್ಯಾನ್ ಅವರು ಭೇಟಿ ನೀಡಿ ಜಿಲ್ಲಾ ಪಂಚಾಯತ್ ಎಂಜಿನಿಯರ್‌ಗಳಾದ ಪ್ರಭಾಕರ್ ಮತ್ತು ಪ್ರಶಾಂತ್ ಆಳ್ವ ಅವರನ್ನು ಸ್ಥಳಕ್ಕೆ ಬರಮಾಡಿಕೊಂಡು ಟ್ಯಾಂಕಿ ಹಾಗೂ ಶಾಲಾ ಕೊಠಡಿಯನ್ನು ನೆಲಸಮ ಮಾಡುವಾಗ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲು ಗ್ರಾ.ಪಂ.ಗೆ ಸೂಚಿಸಿದರು. ಮುಂದಿನ ಮೂರು ದಿನಗಳಲ್ಲಿ ಅಪಾಯದಲ್ಲಿರುವ ನೀರಿನ ಸಂಪು, ಶಾಲಾ ಕೊಠಡಿಯನ್ನು ಸಹ ತೆರವುಗೊಳಿಸಲು ನವಯುಗ್ ಸಂಸ್ಥೆ ಮುಂದಾಗಿದೆ. ಟ್ಯಾಂಕ್, ಸಂಪು, ಕೊಠಡಿ
ಶಾಲೆಯ ಸುಮಾರು 40 ಸೆಂಟ್ಸ್ ಸ್ಥಳದಲ್ಲಿ 30 ವರ್ಷದ ಹಿಂದೆ ನೀರಿನ ಓವರ್‌ಹೆಡ್ ಟ್ಯಾಂಕ್ ಹಾಗೂ 15 ವರ್ಷದ ಹಿಂದೆ ರಾಜೀವ್ ಗಾಂಧಿ ಯೋಜನೆಯಲ್ಲಿ ನೀರಿನ ಸಂಪನ್ನು ನಿರ್ಮಿಸಲಾಗಿತ್ತು. ಎರಡೂ ತಲಾ 50,000 ಲೀಟರ್ ಸಾಮರ್ಥ್ಯ ಹೊಂದಿವೆ. ಪಕ್ಕದಲ್ಲಿಯೇ 2004ರಲ್ಲಿ ಶಾಲಾ ಕೊಠಡಿಯನ್ನು ನಿರ್ಮಿಸಲಾಗಿತ್ತು. ಇದನ್ನು ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕಾಗಿ ಬಳಸಲಾಗುತ್ತಿತ್ತು. ಅಲ್ಲೇ ಬದಿಯ 4.5 ಸೆಂಟ್ಸ್ ಸ್ಥಳವನ್ನು ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಪ್ರಾಧಿಕಾರವು ಸ್ವಾಧೀನ ಮಾಡಿ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿದೆ. ಆದರೆ ಶಾಲೆಯಲ್ಲಿ ಕೊಠಡಿಗಳ ಕೊರತೆ ಹಾಗೂ ಟ್ಯಾಂಕಿನ ಮೂಲಕ ನೀರು ಸರಬರಾಜು ಇದ್ದುದರಿಂದ ಅವುಗಳನ್ನು ಕೆಡವದೆ ಉಳಿಸಲಾಗಿತ್ತು ಎಂದು ಯೋಜನಾ ಪ್ರಬಂಧಕರು ತಿಳಿಸಿದರು.
Related Articles
ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್ ‘ಉದಯವಾಣಿ’ಗೆ ಪ್ರತಿಕ್ರಿಯಿಸಿ, ಪ್ರಸ್ತುತ ಎರಡೂ ಟ್ಯಾಂಕಿಗಳಿಂದ ಪಡುಪಣಂಬೂರು, ಕಲ್ಲಾಪು, ಬೆಳ್ಳಾಯರು ಗ್ರಾಮಗಳ ಸುಮಾರು 450 ಮನೆಗಳಿಗೆ ನೀರಿನ ಸರಬರಾಜು ಆಗುತ್ತಿತ್ತು. ಟ್ಯಾಂಕನ್ನು ತೆರವು ಮಾಡಿದ್ದರಿಂದ ಸಮಸ್ಯೆ ಉದ್ಭವಿಸಿದ್ದು ಪರ್ಯಾಯ ವ್ಯವಸ್ಥೆಯನ್ನು ಒಂದೆರಡು ದಿನದಲ್ಲಿ ಕೈಗೊಳ್ಳಲಿದ್ದೇವೆ. ತುರ್ತಾಗಿ ಟ್ಯಾಂಕನ್ನು ನಿರ್ಮಿಸಲು ಶಾಸಕರು ಜಿಲ್ಲಾಧಿ ಕಾರಿಯ ಮೂಲಕ ಸೂಚನೆ ನೀಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ ಎಂದರು.
Advertisement
ಟೆಂಡರ್ ಆದರೂ ನಿರ್ಮಾಣ ಇಲ್ಲಹೆದ್ದಾರಿಗೆಂದು ನೀರಿನ ಟ್ಯಾಂಕೊಂದು ಪಡು ಪಣಂಬೂರು ಗ್ರಾಮಕ್ಕೆ ಕಳೆದ 10 ವರ್ಷಗಳ ಹಿಂದೆಯೇ ಮಂಜೂರಾಗಿತ್ತು. ಆದರೆ ಇಲಾಖೆಯು ಒಟ್ಟು ನಾಲ್ಕು ಬಾರಿ ಟೆಂಡರ್ ಕರೆದಿದ್ದರೂ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಯಾರೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಅದೀಗ ರದ್ದಾಗಿದೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ನವಯುಗ್ ಸಂಸ್ಥೆಯೇ ಒಂದು ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕನ್ನು ತುರ್ತಾಗಿ ನಿರ್ಮಿಸಲು ಇಚ್ಛಿಸಿದಲ್ಲಿ ತಾಂತ್ರಿಕ ಸಲಹೆಯನ್ನು ನೀಡಲು ಬದ್ಧರಾಗಿದ್ದೇವೆ ಎಂದು ಎಂಜಿನಿಯರ್ ಪ್ರಭಾಕರ್ ಪತ್ರಿಕೆಗೆ ಪ್ರತಿಕ್ರಿಯಿಸಿದರು. ಸ್ಥಳಕ್ಕೆ ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ಮುಡಾ ಸದಸ್ಯ ಎಚ್. ವಸಂತ ಬೆರ್ನಾಡ್, ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯ ದರ್ಶಿ ಲೋಕನಾಥ ಭಂಡಾರಿ, ಗ್ರಾಮ ಕರಣಿಕ ಮೋಹನ್, ಮೂಲ್ಕಿ ಅರಮನೆಯ ಗೌತಮ್ ಜೈನ್ ಮತ್ತಿತರರು ಭೇಟಿ ನೀಡಿದರು. ಅಪಘಾತ: ಓರ್ವ ಸಾವು
ಗುಡ್ಡ ಕುಸಿತದಿಂದ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಸಂಚಾರಕ್ಕೆ ತಡೆ ಮಾಡಿದ್ದರಿಂದ ಸಂಚಾರದ ಒತ್ತಡ ತೀವ್ರಗೊಂಡಿತ್ತು. ಈ ಸಂದರ್ಭದಲ್ಲಿ ಕಲ್ಲಾಪು ಪ್ರದೇಶದಿಂದ ಹೆದ್ದಾರಿಯತ್ತ ಸಂಚರಿಸುತ್ತಿದ್ದ ದ್ವಿಚಕ್ರ ಸವಾರ ಸ್ಥಳೀಯ ನಿವಾಸಿ ರಾಘವೇಂದ್ರ ಶೆಟ್ಟಿಗಾರ್ (45) ಅವರ ವಾಹನಕ್ಕೆ ಟ್ರೇಲರ್ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅವರು ಕಾಪುವಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿರುವ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಘಟನೆ ಸ್ಥಳೀಯವಾಗಿ ಆಕ್ರೋಶಕ್ಕೂ ಕಾರಣವಾಯಿತು. ಮಂಗಳೂರು ಉತ್ತರ ವಲಯ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಸ್ಥಳಕ್ಕೆ ಆಗಮಿಸಿ ಸಿಬಂದಿ ಮೂಲಕ ಸಂಚಾರ ಒತ್ತಡವನ್ನು ನಿಯಂತ್ರಿಸಿದ್ದಾರೆ. ಗುಡ್ಡ ಕುಸಿತದಿಂದ ಮುಂದಿನ ಮೂರು ದಿನಗಳ ಕಾಲ ಸಂಚಾರಕ್ಕೆ ತೊಡಕಾಗಬಹುದು ಎಂದು ತಿಳಿಸಿದ್ದಾರೆ. ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯ
ಗುಡ್ಡವು ಕುಸಿತ ಕಂಡಾಗಲೇ ಕಬ್ಬಿಣದ ಜಾಲರಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದು ಸರಿಯಲ್ಲ. ಬದಲಾಗಿ ಶಾಶ್ವತ ತಡೆಗೋಡೆ ಅಥವಾ ಕಾಂಕ್ರೀಟ್ ಸ್ಲ್ಯಾಬ್ ಕಟ್ಟಬೇಕಿತ್ತು. ಇದು ಹೆದ್ದಾರಿ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದಾದ ಅವಘಡವಾಗಿದೆ. ಟ್ಯಾಂಕ್ ಮತ್ತು ಶಾಲಾ ಕೊಠಡಿ ತೆರವು ಆದ ಅನಂತರವೂ ಉಳಿದ ಭಾಗದಲ್ಲಿ ಸೂಕ್ತವಾದ ತಡೆಗೋಡೆಯನ್ನು ನಿರ್ಮಿಸಬೇಕು, ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ನೀಡಲಿದ್ದೇನೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸದೇ ಇರುವುದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ.
– ಕೆ. ಅಭಯಚಂದ್ರ, ಶಾಸಕರು