Advertisement
ಜೋಡುಪಾಲದ ಮೇಲ್ಬದಿಯ ಈ ಗುಡ್ಡ ಗುರುವಾರದಿಂದಲೇ ಕುಸಿಯತೊಡಗಿತ್ತು. ಅಲ್ಲಿರುವ ಮನೆಗಳ ನಿವಾಸಿಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಪೂರ್ವಾಹ್ನ ಗುಡ್ಡ ಸಂಪೂರ್ಣ ಜಾರಿ ಅಲ್ಲಿರುವ ಮೂರು ಮನೆಗಳನ್ನು ಕಬಳಿಸಿದೆ. ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಸುಮಾರು 3 ಕಿ.ಮೀ.ನಷ್ಟು ವಾಹನವಾಗಲಿ, ಜನರಾಗಲೀ ಹೋಗಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಸುಮಾರು 800 ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ಭೂಕುಸಿತಗೊಂಡಿರುವ 2ನೇ ಮೊಣ್ಣಂಗೇರಿ ಪ್ರದೇಶದ ಗುಡ್ಡದಲ್ಲಿ ಇನ್ನೂ ಸುಮಾರು 80ರಿಂದ 100 ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ಯತ್ನ ನಡೆಯಬೇಕಷ್ಟೇ.
ಗಂಜಿಕೇಂದ್ರಗಳಿಗೆ ಜನರ ಸ್ಥಳಾಂತರ
ಜೋಡುಪಾಲದ 2ನೇ ಮೊಣ್ಣಂಗೇರಿ ಪ್ರದೇಶ ಮತ್ತು ಜೋಡುಪಾಲ ಆಸುಪಾಸಿನ ಸುಮಾರು 600 ಜನರನ್ನು ಸಂಪಾಜೆ, ಚೆಂಬು ಮತ್ತು ಅರಂತೋಡಿನ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಾಲೆಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಜೋಡುಪಾಲದ ಸ.ಹಿ.ಪ್ರಾ. ಶಾಲೆಯಲ್ಲಿ ಸುಮಾರು 100 ನಿರಾಶ್ರಿತರು ಆಶ್ರಯ ಪಡೆದಿದ್ದು. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸಾಧ್ಯ ಆಗುತ್ತಿಲ್ಲ. ಈ ಪ್ರದೇಶ ಮಡಿಕೇರಿ ತಾಲೂಕು ವ್ಯಾಪ್ತಿಗೆ ಬರುವುದಾದರೂ ಈ ರಸ್ತೆಯಲ್ಲಿ ಈಗಾಗಲೇ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಯಾರೂ ಇಲ್ಲಿಗೆ ಬರುವ ಸಾಧ್ಯತೆ ಇರಲಿಲ್ಲ. ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಎಸ್.ಐ. ಮಂಜುನಾಥ್ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಕೊಡಗು ಪೊಲೀಸರು, ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ದಳ ಕೂಡ ಸ್ಥಳಕ್ಕೆ ಆಗಮಿಸಿ ಊರವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಅಪರಾಹ್ನ ವೇಳೆಗೆ ಸುಳ್ಯ ಸರಕಾರಿ ಆಸ್ಪತ್ರೆಯ ಉದ್ಯೋಗಿ ಬಸಪ್ಪ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇಲ್ಲಿಯ ಹಮೀದ್ ಎಂಬವರ ಇಬ್ಬರು ಮಕ್ಕಳು ಕೂಡ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
Related Articles
ಈ ಮಧ್ಯೆ ಅಲ್ಲಿ ಶಾಲೆಯೊಳಗೆ ಸಿಲುಕಿಕೊಂಡಿದ್ದ ಸುಮಾರು 60ರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಕಲ್ಲುಗುಂಡಿ ಶಾಲೆ ಮತ್ತು ಅರಂತೋಡು ತೆಕ್ಕಿಲ್ ಶಾಲೆಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ಆ ಪ್ರದೇಶದಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ಸಾಗಿದೆ. ಊರವರು ಸಂತ್ರಸ್ತರಿಗೆ ಆಹಾರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಕೂಡ ಬೃಹತ್ ಕಲ್ಲುಗಳೊಡನೆ ಧಾರಾಕಾರ ನೀರು ಗುಡ್ಡದಿಂದ ಇಳಿದು ಬರುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕುಂಟಾಗಿದೆ.
Advertisement