ಗದಗ: ಕಾಸಿದ್ದವವರಿಗೆ ಜಮೀನು ಖರೀದಿಸುವ ಅವಕಾಶ ನೀಡಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಸರಕಾರದ ನಿರ್ಧಾರದಿಂದ ಗ್ರಾಮಗಳ ಆರ್ಥಿಕ ವ್ಯವಸ್ಥೆ ಬುಡಮೇಲಾಗಲಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ಮುಂದೆ ಯಾರು ಬೇಕಾದರೂ, ಯಾವುದೇ ಅಡೆತಡೆಗಳಿಲ್ಲದೇ ಕೃಷಿ ಜಮೀನು ಖರೀದಿಸಬಹುದು. ಇಂತಹ ಅವಕಾಶ ನೀಡಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಮುಂದಾಗಿದೆ. ಇದರಿಂದ ರೈತರ ಜಮೀನುಗಳಿಗೆ ತಕ್ಷಣಕ್ಕೆ ಒಳ್ಳೆಯ ಬೆಲೆ ದೊರಕಬಹುದು. ಆದರೆ ಜಮೀನು ಮಾರಾಟದಿಂದ ಬಂದ ಹಣ ಸದ್ವಿನಿಯೋಗ ಆಗದಿದ್ದರೆ, ಜಮೀನು ಕಳೆದುಕೊಂಡ ರೈತರು ಹಾಗೂ ಅವರ ಮಕ್ಕಳು ಬೀದಿಗೆ ಬರುತ್ತಾರೆ. ಕೃಷಿಕರು ಅಲ್ಲದಿದ್ದರೂ ಜಮೀನು ಖರೀದಿಗೆ ಅವಕಾಶ ದೊರಕಿದರೆ ಕಪ್ಪು ಹಣ ಆಸ್ತಿ ರೂಪದಲ್ಲಿ ಪರಿವರ್ತನೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅನ್ನದಾತನ ರಕ್ಷಣೆಗೆ ಕಾಂಗ್ರೆಸ್ ಪಕ್ಷವೇ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಿದ್ದು, ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಶೀಘ್ರವೇ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಜುಲೈ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಐದು ವರ್ಷಗಳ ಅವಧಿ ಪೂರ್ಣಗೊಳ್ಳಲಿದೆ. ಕೋವಿಡ್ 19 ನೆಪವೊಡ್ಡಿ ಚುನಾವಣೆ ಮುಂದೂಡಿ, ಬಿಜೆಪಿ ಕಾರ್ಯಕರ್ತರ ನಾಮನಿರ್ದೇಶನಕ್ಕೆ ಮುಂದಾಗಿದ್ದ ರಾಜ್ಯ ಸರಕಾರ ಚಿಂತನೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸರಕಾರ ತನ್ನ ಚಿಂತನೆಯಿಂದ ಹಿಂದಕ್ಕೆ ಸರಿದಿದೆ. ನಾಮನಿರ್ದೇಶನ ಬದಲಾಗಿ ಆಡಳಿತಾಧಿಕಾರಿ ನೇಮಿಸುವ ಸುಳಿವು ನೀಡಿರುವುದು ಪ್ರಜಾಪ್ರಭುತ್ವ ಹಾಗೂ ಜನಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದರು.
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ ಕುಮಾರ್ ಎಚ್ಚರಿಕೆ ಹೆಜ್ಜೆಗಳನ್ನಿಡುತ್ತಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ಸರಕಾರಕ್ಕೆ ಸೂಕ್ತ ಸಲಹೆ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.