ರಾಮನಗರ: ಹಾರೋಹಳ್ಳಿ ಕೈಗಾರಿಕ ಪ್ರದೇಶದ 5ನೇ ಹಂತದ ಸ್ಥಾಪನೆಗೆ ಉದ್ದೇಶಿತ ಭೂಮಿಗೆ ದರ ನಿರ್ಧಾರ ಸಾಧ್ಯವಾಗದೆ ಕೆಐಎಡಿಬಿ ಹಾಗೂ ಭೂ ಮಾಲೀಕರ ನಡುವಿನ ಸಭೆ ಮತ್ತೂಮ್ಮೆ ವಿಫಲವಾಗಿದೆ.
ಇಲ್ಲಿನ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಭೂ ನಿರ್ಧಾರ ಸಲಹಾ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಭೂಮಾಲಿಕರು ಮತ್ತು ರೈತರು ದರ ನಿರ್ಧರಣೆಗಾಗಿ ಮತ್ತೂಮ್ಮೆ ಸಭೆ ಸೇರಿದ್ದರು. ಆದರೆ, ದರ ನಿಗದಿ ಆಗದಕಾರಣ ಸಭೆ ವಿಫಲವಾಗಿದೆ.
ತಾಲೂಕಿನ ಕಂಚುಗಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಚುಗಾರನಹಳ್ಳಿ ಮತ್ತು ಕಂಚುಗಾರನಹಳ್ಳಿ ಕಾವಲ್ ಹಾಗೂ ಹಾರೋಹಳ್ಳಿ ಗ್ರಾಪಂಗೆ ಸೇರಿದ ಮುಡೇನಹಳ್ಳಿ ಮತ್ತು ಯರೇಹಳ್ಳಿ ಸೇರಿದಂತೆ ನಾಲ್ಕು ಗ್ರಾಮಗಳ 912.12 ಎಕರೆ ಪ್ರದೇಶವನ್ನು ಹಾರೋಹಳ್ಳಿ5ನೇ ಹಂತದ ಕೈಗಾರಿಕಾ ವಸಾಹತು ಸ್ಥಾಪನೆಗಾಗಿ ಕೆಐಎಡಿಬಿ ಭೂ ಸ್ವಾಧಿನಕ್ಕೆ ಮುಂದಾಗಿದೆ. ದರ ನಿರ್ಧಾರ ಸಮಿತಿ ಅಧಿಕಾರಿಗಳು ಮುಡೇನಹಳ್ಳಿ ಮತ್ತು ಯರೇಹಳ್ಳಿ ವ್ಯಾಪ್ತಿಯ ಪ್ರತಿ ಎಕರೆಗೆ ಭೂಮಿಗೆ 80 ಲಕ್ಷ ರೂ., ಕಂಚುಗಾರನಹಳ್ಳಿ ಮತ್ತು ಕಾವಲ್ ಗ್ರಾಮಗಳಲ್ಲಿ ಒಳಭಾಗದ ಭೂಮಿಗೆ 90 ಲಕ್ಷ ರೂ., ರಸ್ತೆ ಬದಿಯಿರುವ ಭೂಮಿಗೆ 1 ಕೋಟಿ ರೂ. ದರ ನೀಡುವುದಾಗಿ ತಿಳಿಸಿದರು.
ಸಮ್ಮಿತಿ ಇಲ್ಲ: ಈ ದರಗಳಿಗೆ ತಮ್ಮ ಒಪ್ಪಿಗೆಯಿಲ್ಲ ಎಂದು ಭೂ ಮಾಲಿಕರು ಸಹ ತಮ್ಮ ಪಟ್ಟು ಹಿಡಿದರು. ಸರ್ಕಾರದ ಮಾರ್ಗಸೂಚಿ ದರ ಎಕರೆಗೆ ಗರಿಷ್ಠ 1.20 ಕೋಟಿ ರೂ. ಇದೆ. ಪ್ರಸ್ತುತ ಮಾರುಕಟ್ಟೆ ಬೆಲೆ ಎಕರೆಗೆ 1.50 ಕೋಟಿ ರೂ. ಹೆಚ್ಚಿಗಿದೆ. ಪ್ರತಿ ಎಕರೆಗೆ ಕನಿಷ್ಠ 1.20 ಕೋಟಿ ರೂ.ನೀಡದ ಹೊರತು ಯಾವುದೇ ಕಾರಣಕ್ಕೂ ಭೂಮಿಕೊಡುವುದಿಲ್ಲ ಎಂದರು.
ಪರಿಹಾರ ಬೇಕು: ಮುಂದಿನ ಸಭೆ ವೇಳೆಗೆ ಅಧಿಕಾರಿ ಗಳು ಬಿಡದಿ ಟೌನ್ ಶಿಪ್ ನಿರ್ಮಾಣ ಸಂಬಂಧ ಗುರುತಿಸಿರುವ ಭೂ ಪ್ರದೇಶ ಹೊರತುಪಡಿಸಿ ಅದರ ಆಸುಪಾಸಿನ ಭೂಮಿಯ ಪ್ರಸಕ್ತ ಮಾರುಕಟ್ಟೆಯ ಬೆಲೆಯನ್ನು ಪರಿಗಣಿಸಬೇಕು. ದೇವನಹಳ್ಳಿಯಲ್ಲಿ ಪ್ರತಿ ಎಕರೆಗೆ ಸರ್ಕಾರ1.50ಕೋಟಿ,ಕೋಲಾರದಲ್ಲಿ1.20 ಕೋಟಿ ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ಕಂಚುಗಾನಹಳ್ಳಿ ಮತ್ತು ಹಾರೋಹಳ್ಳಿ ಬಳಿ ಭೂ ಸ್ವಾಧೀನಕ್ಕೆ ಗುರುತಿಸಿರುವ ಫಲವತ್ತಾದ ಭೂಮಿಗೂ ಪರಿಹಾರ ಬೇಕು ಎಂದು ರೈತರು ತಮ್ಮ ಬೇಡಿಕೆಗಳನ್ನು ಸಭೆಯಲ್ಲಿಟ್ಟರು.
ಈ ಮಧ್ಯೆ ದನಿ ಗೂಡಿಸಿದ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಬಿ.ವೆಂಕಟೇಶ್ ಮಾತನಾಡಿ, ರೈತರಿಗೆ ಸ್ಟಾಂಪ್ ಡ್ನೂಟಿಯಲ್ಲಿ ರಿಯಾಯಿತಿ, ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಮತ್ತಿತರ ಸೌಲಭ್ಯ ನೀಡುವುದಾಗಿ ತಿಳಿಸಿದರು. ಆದರೆ, ರೈತರು ಇದಕ್ಕೆ ಸೊಪ್ಪು ಹಾಕಲಿಲ್ಲ. ವ್ಯಾಪ್ತಿಗೆ ಬಾರದು: ಭೂ ಮಾಲೀಕರು ಆಗ್ರಹಿಸುತ್ತಿರುವ ದರ ನಿಗದಿ ಮಾಡುವುದು ತಮ್ಮ ವ್ಯಾಪ್ತಿಗೆ ಮೀರಿದ್ದು, ಬೇಡಿಕೆ ವರದಿಯನ್ನು ಕೇಂದ್ರ ಭೂ ದರ ನಿರ್ಧಾರ ಸಲಹಾ ಸಮಿತಿಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ಭೂಮಾಲಿಕರಿಗೆ ತಿಳಿಸಿದರು.
ಸಭೆಯಲ್ಲಿ ರಾಮನಗರ ತಹಸೀಲ್ದಾರ್ ನರಸಿಂಹ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.