ವಾಡಿ: ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಉದ್ದೇಶದಿಂದ ಸಾವಿರಾರು ಎಕರೆ ಭೂಮಿ ಗುರುತಿಸಿ ಖರೀದಿ ಪ್ರಕ್ರಿಯೆ ಅರ್ಧಕ್ಕೆ ಕೈಬಿಡಲಾಗಿದೆ. ಉದ್ಯಮಿಪತಿಗಳ ಕಳ್ಳಾಟದಿಂದಾಗಿ ಸರ್ಕಾರದ ಸಾಲ ಸೌಲತ್ತುಗಳು ಕೈ ತಪ್ಪುತ್ತಿವೆ ಎಂದು ರಾವೂರ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಗ್ರಾಮಕ್ಕೆ ಭೇಟಿ ನೀಡಿದ ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಸಲ್ಲಿಸಿದ ರೈತರು, ಸಿಮೆಂಟ್ ಕಂಪನಿಗಳ ಭೂಮಿ ಖರೀದಿ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2009ನೇ ಸಾಲಿನಲ್ಲಿ ರಾವೂರು ಗ್ರಾಮಕ್ಕೆ ಕಾಲಿಟ್ಟ ವಿವಿಧ ಸಿಮೆಂಟ್ ಕಂಪನಿಗಳು, ಉತ್ಪಾದನಾ ಘಟಕ ಸ್ಥಾಪಿಸಲು ಒಟ್ಟು 2,800 ಎಕರೆ ಭೂಮಿ ಗುರುತಿಸಿದ್ದರು. ಅಂದಿನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಎಕರೆ ಭೂಮಿಗೆ 9 ಲಕ್ಷ ರೂ. ನಿಗದಿಪಡಿಸಿದ್ದರು. 800 ಎಕರೆ ಭೂಮಿ ಖರೀದಿ ಮಾಡಲಾಯಿತು. ಇನ್ನುಳಿದ 2000 ಎಕರೆ ಭೂಮಿಯ ಮೇಲೆ ಲೀಸ್ ಪಡೆದಿರುವ ರೈಮಾಂಡ್ಸ್ ಲಿಮಿಟೆಡ್ ಸಿಮೆಂಟ್ ಕಂಪನಿ, ಕಳೆದ 13 ವರ್ಷಗಳಿಂದ ಭೂಮಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸದೆ ಜನರನ್ನು ಗೋಳಾಡಿಸುತ್ತಿದೆ ಎಂದು ಆಪಾದಿಸಿದರು.
ಖರೀದಿ ಮಾಡದಿರುವ ಸಾವಿರಾರು ಎಕರೆ ಭೂಮಿಗೂ ಲೀಸ್ ಪಡೆದಿರುವ ಸಿಮೆಂಟ್ ಕಂಪನಿ, ಸರ್ಕಾರದ ಕೈಗಾರಿಕಾ ನೀತಿಗಳನ್ನು ಉಲ್ಲಂಘಿಸಿದೆ. ಇದರಿಂದ ಕೃಷಿ ಚಟುವಟಿಕೆ ಮುಂದುವರೆಸಲು ವಿವಿಧ ಸಂಕಷ್ಟಗಳನ್ನು ಎದುರಿಸಬೇಕಾದ ದುಸ್ಥಿತಿ ಎದುರಾಗಿದೆ. ಬೀಜ, ರಸಗೊಬ್ಬರ, ತೈಲ ಸಿಂಪರಣೆ ಇತ್ಯಾದಿ ಅನುಕೂಲಕ್ಕಾಗಿ ನೀಡಲಾಗುವ ಬ್ಯಾಂಕ್ ಸಾಲ ಸೌಲಭ್ಯಗಳು ಕೈತಪ್ಪಿವೆ. ಜಮೀನುಗಳ ಮೇಲೆ ಲೀಸ್ ಇರುವುದರಿಂದ ಸಾಲ ಕೊಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಸಮತೋಲನ ಮಳೆಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದೇವೆ. ಅತ್ತ ಕಂಪನಿ ಭೂಮಿ ಖರೀದಿಗೆ ಮುಂದಾಗುತ್ತಿಲ್ಲ. ಖರೀದಿಸಲಾಗದ ಭೂಮಿಗಳ ಮೇಲಿನ ಲೀಸ್ ತೆರವು ಮಾಡುತ್ತಿಲ್ಲ. ಪರಿಣಾಮ ಕೃಷಿ ಸೌಲಭ್ಯಗಳನ್ನು ಪಡೆಯಲಾಗದೆ ಮತ್ತು ಇತರರಿಗೆ ಭೂಮಿ ಮಾರಾಟ ಮಾಡಲಾಗದೆ ಅನ್ಯಾಯಕ್ಕೊಳಗಾಗಿದ್ದೇವೆ. ಕೂಡಲೇ ಕಂಪನಿಯವರು ಗುರಿತಿಸಲಾದ ಭೂಮಿಯನ್ನು ಖರೀದಿಗೆ ಮುಂದಾಗಬೇಕು. ಅಥವ ಜಮೀನುಗಳ ಮೇಲಿನ ಲೀಸ್ ತೆರವುಗೊಳಿಸಬೇಕು ಎಂದು ಆಗ್ರಹಿಸಿರುವ ರೈತರು, ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರೈತರಾದ ಗುರುರಾಜ ವೈಷ್ಣವ, ಧರ್ಮರಾಜ ದೇಸಾಯಿ, ಮಹೇಶ ಬಾಳಿ, ಮಲ್ಲಿನಾಥ ಪರೀಟ್, ದೇವಿಂದ್ರ ಅಚೋಲಿ, ರಾಮು ಸಕ್ರಿ, ಆದಪ್ಪ ದೇಸಾಯಿ, ಅಂಬ್ರಿàಶ ದೇಸಾಯಿ, ಶರಣು ಪರಹತಾಬಾದ, ಶ್ರವಣಕುಮಾರ ಚವ್ಹಾಣ, ರಮೇಶ ಸಂಗಾವಿ ಮನವಿ ಪತ್ರ ಸಲ್ಲಿಸುವ ನಿಯೋಗದಲ್ಲಿ ಇದ್ದರು.