Advertisement
1924ರಲ್ಲಿ ಮೈಸೂರು ಮಹಾರಾಜರಿಂದ ಮಂಜೂ ರಾಗಿರುವ ಜಮೀನಿನ ಒಡೆತನಕ್ಕಾಗಿ ರೈತರು ಅಲೆ ದಾಡುವಂತಾಗಿದೆ. “ಸರ್ಕಾರಿ ಫಡಾ’ ಎಂದು ಪಹಣಿ ಯಲ್ಲಿ ಉಲ್ಲೇಖವಾಗಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೊಂಡ ಸಾಲಮನ್ನಾ ಯೋಜನೆಯೂ ಈ ರೈತರಿಗೆ ಅನ್ವಯವಾಗಿಲ್ಲ. ಸಹಕಾರ ಸಂಘಗಳಷ್ಟೇ ಅಲ್ಲ, ಖಾಸಗಿ ಲೇವಾದೇವಿದಾರರು ಅಥವಾ ಬ್ಯಾಂಕ್‌ಗಳಿಂದಲೂ ಇವರಿಗ ಸಾಲ ಸಿಗುವುದಿಲ್ಲ.
Related Articles
Advertisement
ಪರಿಶೀಲಿಸಿ ಕ್ರಮ: ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿ, ಈ ಕುರಿತು ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತೇನೆ. ಹಿಂದೆ ಏನಾಗಿತ್ತೋ ಗೊತ್ತಿಲ್ಲ, ಕಾನೂನಿನಲ್ಲಿ ಅವಕಾಶ ಇದ್ದರೆ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ. ರೈತರು ಇತ್ತೀಚೆಗೆ ತಮ್ಮ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆ ಮತ್ತಿತರ ಮಾಹಿತಿ ಕೇಳಿದರೆ ಸಿಗುತ್ತಿಲ್ಲ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟೆಕೆರೆ ಗ್ರಾಮದವರು ತಹಸೀಲ್ದಾರ್ ಅವರಿಗೆ ಪತ್ರ ಬರೆದರೆ, ಸರ್ಕಾರಿ ಫಡಾ ಮಾಡಿಕೊಂಡಿರುವ ಬಗ್ಗೆ ಸರ್ಕಾರಿ ಆದೇಶ ಹಾಗೂ ಇತರೆ ದಾಖಲಾತಿಗಳು ಲಭ್ಯವಿರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಬಳಿ ಹೋದರೆ, ಮೂರು ವರ್ಷ ಸತತ ಉಳುಮೆ ಮಾಡದಿದ್ದರೆ ಕಂದಾಯ ಪಾವತಿಸದಿದ್ದರೆ ಅಂತಹ ಜಮೀನು ಸರ್ಕಾರಿ ಫಡಾ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ರೈತರು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ಹತ್ತು ವರ್ಷದಿಂದ ಸರ್ಕಾರವೇ ಅವರಿಂದ ಕಂದಾಯ ಪಾವತಿಸಿಕೊಳ್ಳುತ್ತಿಲ್ಲ. ಸರ್ಕಾರಿ ಫಡಾ ಎಂದು ಪಹಣಿಯಲ್ಲಿರುವುರಿಂದ ನಾಲ್ಕೈದು ಜಿಲ್ಲೆ ಗಳಲ್ಲಿ 95 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರು ಜಮೀನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರಿಗೂ ಪತ್ರದ ಮೂಲಕ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ.
ಏನಿದು ಸರ್ಕಾರಿ ಫಡಾ? : ಕಂದಾಯ ಜಮೀನುಗಳಲ್ಲಿ ಸರ್ಕಾರಿ ಖರಾಬು, ಸಿ ಖರಾಬು, ನೆಡು ತೋಪು, ಗುಂಡು ತೋಪು, ಸೊಪ್ಪಿನ ಬೆಟ್ಟ, ಕಾನು ಎಂದು ಪಹಣಿಯಲ್ಲಿ ನಮೂದಾಗಿರುತ್ತದೆ. ಹಳೇ ಮೈಸೂರು ಭಾಗದ ಕೆಲವು ಭಾಗಗಳಲ್ಲಿ 1995ರ ಈಚೆಗೆ ಸರ್ಕಾರಿ ಫಡಾ ಎಂದು ಪಹಣಿಯಲ್ಲಿ ನಮೂದಾಗುತ್ತಿದೆ, ಇದು ಸರ್ಕಾರಿ ಭೂಮಿ ಎಂಬ ಅರ್ಥ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ತಮ್ಮ ಕುಟುಂಬದ ಪೂರ್ವಿಕರ ಹೆಸರು ಇದ್ದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಸರ್ಕಾರಿ ಫಡಾ ಎಂದು ಬರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
–ಎಸ್.ಲಕ್ಷ್ಮಿನಾರಾಯಣ