Advertisement

“ಹಿಂದ’ಮಠಗಳಿಗೆ ಬೆಂಗ್ಳೂರಲ್ಲಿ ಜಮೀನು?

08:52 AM Nov 01, 2017 | |

ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಮಠಗಳಿಗೆ ದೇಣಿಗೆ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ಮುಂದುವರಿದಿದ್ದು, ತಮ್ಮ ಅಹಿಂದ ಟ್ರಂಪ್‌ ಕಾರ್ಡ್‌ ಬಳಕೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಳಿದ ಮತ್ತು ದಲಿತ ಮಠಗಳ ಮನ ಸೆಳೆಯಲು ಮುಂದಾಗಿರುವ ಸಿದ್ದರಾಮಯ್ಯ, ಸುಮಾರು 40ಕ್ಕೂ ಹೆಚ್ಚು “ಹಿಂದ’ ಮಠಗಳಿಗೆ ಬೆಂಗಳೂರಿನಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಸರ್ಕಾರದಿಂದ ಜಮೀನು ನೀಡಲು ಮುಂದಾಗಿದ್ದಾರೆ.

Advertisement

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಮಂಗಳವಾರ ಉಪ್ಪಾರ, ಮಾದರ, ಹಡಪದ ಸೇರಿ ಸುಮಾರು 40ಕ್ಕೂ ಹೆಚ್ಚು ಹಿಂದುಳಿದ ಮತ್ತು ದಲಿತ ಸಮುದಾಯಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ಬೆಂಗಳೂರಿನಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಜಮೀನು ನೀಡುವಂತೆ ಮನವಿ ಮಾಡಿಕೊಂಡರು. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಂಜನೇಯ, ಈ ಕುರಿತು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ, ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.

ಉಪ್ಪಾರ ಸಮಾಜದ ಭಗೀರಥ ಮಠದ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ಮತ್ತು ದಲಿತ ಸಮುದಾಯದ ಮಠಗಳ ಏಳಿಗೆಗೆ ಬೆಂಗಳೂರಿನಲ್ಲಿ ಅವಕಾಶ ಇಲ್ಲ. ಸರ್ಕಾರದಿಂದ ಎಲ್ಲ ಹಿಂದುಳಿದ ಮಠಗಳಿಗೂ ಜಮೀನು ನೀಡುವಂತೆ ಕೋರಿದ್ದೇವೆ. ಸಿಎಂ ಮುಂದಿನ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ವಿಶೇಷ ಭೋಜನ: ಸ್ವಾಮೀಜಿಗಳಿಗೆ ಸಚಿವ ಆಂಜನೇಯ ಅವರ ಮನೆಯಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಿದ್ದರು. ಸ್ವತಃ ಸಚಿವರು ಎಲ್ಲ ಸ್ವಾಮೀಜಿಗಳಿಗೂ “ಇದು ಸಿಎಂ ವಡೆ’ ಎಂದು ಚಟಾಕಿ ಹಾರಿಸಿದರು. ಸಿದ್ದರಾಮಯ್ಯ ಅವರೂ ವಿಶೇಷ ಭೋಜನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ಭೇಟಿಯಲ್ಲಿ ವಿಶೇಷತೆ ಏನಿಲ್ಲ. ಅವರು ಕೆಲವೊಂದು ಬೇಡಿಕೆ ಇಟ್ಟಿದ್ದಾರೆ. ಪರಿಶೀಲಿಸಿ ತೀರ್ಮಾನ ಮಾಡುತ್ತೇನೆ ಎಂದರು. 

ಸಿಎಂ ಕಾರಿಗೆ ಘೇರಾವ್‌
ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ದಲಿತ ಸಮುದಾಯದ ಎಡಗೈ ಪಂಗಡದ ಕಾರ್ಯ ಕರ್ತರು ಸಿದ್ದರಾಮಯ್ಯ ಅವರ ಕಾರಿಗೆ ಘೇರಾವ್‌ ಹಾಕಿದ ಪ್ರಸಂಗ ನಡೆಯಿತು. ಸಚಿವ ಎಚ್‌. ಆಂಜನೇಯ ನಿವಾಸದಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಂಡ ನಂತರ ವಾಪಸ್‌ ತೆರಳುವಾಗ ಎಡಗೈ ಪಂಗಡಕ್ಕೆ ಸೇರಿದ ಕಾರ್ಯಕರ್ತರು ಸಿಎಂ ಕಾರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.  

Advertisement

ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಮಂಗಳವಾರ 40ಕ್ಕೂ ಹೆಚ್ಚು ಹಿಂದುಳಿದ ಮತ್ತು ದಲಿತ ಸಮುದಾಯಗಳ ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next