ಪಡುಬಿದ್ರಿ: ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತಹ ಸ್ಥಿತಿ ಎಲ್ಲೂರು ಐಟಿಐನದ್ದಾಗಿದೆ. ಸದ್ಯ ಎಲ್ಲೂರು ಗ್ರಾ.ಪಂ. ಸಭಾಭವನದ ಬಾಡಿಗೆ ಕಟ್ಟಡದಲ್ಲಿ ಐದನೇ ವರ್ಷಕ್ಕೆ ಕಾಲಿರಿಸಿ ಮೂರನೇ ಶೈಕ್ಷಣಿಕ ವರ್ಷದಲ್ಲಿ ಮುಂದುವರಿದಿರುವ ಎಲ್ಲೂರು ಐಟಿಐಗೆ ಹೊಸ ಪೀಠೊಪಕರಣಗಳು, ಯಂತ್ರ ಸಾಮಗ್ರಿಗಳು ಬಂದಿವೆ. ಆದರೂ ಈ ಐಟಿಐ ಕಾಲೇಜಿಗೆ ಗ್ರಹಣ ಬಿಟ್ಟಿಲ್ಲ. ನಂದಿಕೂರು ಹಾಗೂ ಪಣಿಯೂರುಗಳಲ್ಲಿ ಎರಡೆರಡು ಭೂಮಿ ಮಂಜೂರಾದರೂ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಅಲ್ಲದೇ ಮೊದಲನೇ ವರ್ಷಕ್ಕೆ ಮೂರೇ ವಿದ್ಯಾರ್ಥಿಗಳಿದ್ದಾರೆ.
ಹಾಗಾಗಿ ಪೂರ್ಣಾವಧಿ ಸಿಬಂದಿಗಳ ನೇಮಕ, ಹೆಚ್ಚಿನ ವಿದ್ಯಾರ್ಥಿಗಳ ಸೇರ್ಪಡೆಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಂಸ್ಥೆಯು ಕಾರ್ಯಾರಂಭಿಸಬೇಕು ಎಂಬುದು ಜನತೆಯ ಆಶಯವಾಗಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಸೂಕ್ತ ಸ್ಥಳದಲ್ಲಿ ಪೂರ್ಣ ಪ್ರಮಾಣದ ಸ್ವಂತ ಕಟ್ಟಡವೂ ಐಟಿಐಗೆ ಅಗತ್ಯವಾಗಿದೆ.
ನಂದಿಕೂರಿನಲ್ಲಿ ಎಲ್ಲರಿಗನುಕೂಲವಾದ ಭೂಮಿ ಮಂಜೂರು
ಈ ನಿಟ್ಟಿನಲ್ಲಿ ಡಾ| ವಿಶಾಲ್ ಉಡುಪಿ ಜಿಲ್ಲಾಧಿಕಾರಿಯವರಾಗಿದ್ದಾಗ ಎಲ್ಲೂರು ಗ್ರಾ. ಪಂ. ನಿರ್ಧಾರದಂತೆ ನಂದಿಕೂರಿನಲ್ಲಿ ಐಟಿಐಗೆ ಸ್ಥಳ ಮಂಜೂರು ಮಾಡಿದ್ದರು. ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿ, ನಂದಿಕೂರು – ಶಿರ್ವ ಲೋಕೋಪಯೋಗಿ ರಸ್ತೆಗೆ ಹೊಂದಿಕೊಂಡು ನಂದಿಕೂರು ಬಳಿ ಗೊತ್ತುಪಡಿಸಿರುವ ಈ ಜಮೀನು ಐಟಿಐಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸನಿಹದಲ್ಲಿಯೇ ಯುಪಿಸಿಎಲ್, ನಂದಿಕೂರು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳನ್ನು ಹೊಂದಿರುವ ಈ ಜಮೀನು ಕೈಗಾರಿಕಾ ತರಬೇತಿ ಸಂಸ್ಥೆಗೆ ಅನುಕೂಲಕರವಾಗಿದೆ. ಆದರೆ ಈ ಜಮೀನನ್ನು ಸರಕಾರದಿಂದ ಐಟಿಐ ಹೆಸರಿಗೆ ಬಂದಿರುವ ಈ ಭೂಮಿಯ ಪಹಣಿಯಲ್ಲಿ ಪ್ರಾಚಾರ್ಯರ ಹೆಸರು ಸೇರಿಸಿ ಸರಿಪಡಿಸಿಕೊಳ್ಳುವ ಕಾರ್ಯವು ನಡೆಯಬೇಕು. ಹಾಗಾದಾಗ ಈ ಸ್ಥಳದಲ್ಲಿ ಸಂಸ್ಥೆ ನಿರ್ಮಾಣವೂ ಸಾಧ್ಯ. ಸುತ್ತಮುತ್ತಲಿನ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಲಿದೆ.
ಸ್ಥಳೀಯ ಪ್ರಾಚಾರ್ಯರ ಜವಾಬ್ದಾರಿ ತೀರ್ಥಹಳ್ಳಿ ಸರಕಾರಿ ಐಟಿಐಯಲ್ಲಿ ಕರ್ತವ್ಯದಲ್ಲಿದ್ದು ಇಲ್ಲಿ ಹೆಚ್ಚುವರಿಯಾಗಿ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿರುವ ಪ್ರಾಚಾರ್ಯ ಸುಧೀಂದ್ರರು ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ. ಈ ಮಧ್ಯೆ ಸ್ಥಳೀಯರಾಗಿರುವ ತರಬೇತುದಾರರೊಬ್ಬರನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಮುಂಬರಲಿರುವ ಪ್ರಾಚಾರ್ಯರೂ ಸ್ಥಳೀಯರೇ ಆಗಿದ್ದು ಇಲ್ಲಿನ ಹೊಣೆ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಭಾರ ಪ್ರಾಚಾರ್ಯರು ಹೇಳುತ್ತಾರೆ.
ವಿದ್ಯಾರ್ಥಿಗಳ ದಾಖಲಾತಿ ಅಸ್ಪಷ್ಟ
ಇಲ್ಲಿ ಇಲೆಕ್ಟ್ರಿಕಲ್ ಮತ್ತು ಫಿಟ್ಟರ್ ವಿಭಾಗದಲ್ಲಿ ತರಬೇತಿ ಪಡೆಯುವ ಅವಕಾಶಗಳಿವೆ. ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಕ್ಕಳಿಗೆ ಜುಲೈ ತಿಂಗಳಾಂತ್ಯದವರೆಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಅವಕಾಶವಿದೆ. ಎಲ್ಲೂರು ಗ್ರಾ. ಪಂ. ನ ಸಮುದಾಯ ಭವನದಲ್ಲಿ ಕಾರ್ಯಾಚರಿಸುತ್ತಿದ್ದರೂ, ಮಕ್ಕಳಿಗೆ ತರಬೇತಿ ಪಡೆಯಲು ಬೇಕಾದ ಸಲಕರಣೆಗಳಿಗೆ ಯಾವುದೇ ಕೊರತೆಯಿಲ್ಲ.