ಮಧುಗಿರಿ: ಸಹಕಾರ ಬ್ಯಾಂಕ್‌ನಿಂದ ನಿಮಗೆ ಸಾಲ ಮಂಜೂರಾಗಿದೆ. ನಿಮ್ಮ ಆಧಾರ್ ಹಾಗೂ ಜಮೀನು ಪಹಣಿ ನೀಡಿದರೆ 20 ಸಾವಿರ ರೂ. ಹಣ ಸಾಲದ ರೂಪದಲ್ಲಿ ನೀಡುತ್ತೇವೆ. ಇದೂ ಮನ್ನಾ ಆಗಲಿದೆ ಎಂದು ನಂಬಿಸಿ ಅಮಾಯಕರಿಗೆ ಮೋಸ ಮಾಡುವ ಜಾಲವೊಂದು ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿ ದೂರು ನೀಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಮಾಡಗಾನ ಹಟ್ಟಿಯ ಸಣೀರಮ್ಮ ಕೋಂ ಕರಿಯಣ್ಣ ಎಂಬ ಮಹಿ ಳೆಯು ತನ್ನ ಸ್ವಯಾರ್ಜಿತ ಆಸ್ತಿಯಾದ ಪುಟ್ಟೇನಹಳ್ಳಿ ಸ.ನಂ.10/4 ರನ್ನು ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಚಿನ್ನಪ್ಪ ಲೇಟ್ ಗಂಗಯ್ಯ ಎಂಬುವವರಿಗೆ ಶುದ್ಧಕ್ರಯಕ್ಕೆ ಬರೆದುಕೊಟ್ಟಿದ್ದರು.
ಇದರ ಹಿಂದೆ ಈ ಮಾಫಿಯಾದ ಕೈವಾಡವಿದ್ದು, ಅಮಾಯಕರಿಗೆ ಸಾಲ ನೀಡುವುದಾಗಿ ತಿಳಿಸಿ, ಅದಕ್ಕೆ ಬೇಕಾಗುವ ದಾಖಲೆ ಪಡೆದು, ಕ್ರಯ ತಿಳಿಸದೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಹಾಗೂ ಸಂಬಂಧಿಕರು ವಿಚಾರಿಸಿದಾಗ ಕ್ರಯ ಮಾಡಿಕೊಟ್ಟಿರುವುದಾಗಿ ಮೊದಲು ನಿರಾಕರಿಸಿದ ತಾಲೂಕಿನ ಶ್ರೀನಿವಾಸಪುರದ ಸಿದ್ದಗಂಗಪ್ಪ ಕೋ ನರಸಿಂಹಯ್ಯ ಹಾಗೂ ಹಳೆ ಇಟಕಲೋಟಿಯ ನಾಗರಾಜು ನರಸಿಂಹಯ್ಯ ಎಂಬ ಆಸಾಮಿಗಳು ಧರ್ಮದೇಟು ಬಿದ್ದ ನಂತರ ಕ್ರಯ ಮಾಡಿರುವುದನ್ನು ಒಪ್ಪಿಕೊಂಡಿದ್ದು ಆರೋಪಿಗಳನ್ನು ಠಾಣೆಗೆ ಒಪ್ಪಿಸಿದ್ದಾರೆ.
ಸಹಿ ಪಡೆದು ಕ್ರಯ ಮಾಡಿಸಿಕೊಂಡಿದ್ದಾರೆ: ಈ ಬಗ್ಗೆ ‘ಉದಯವಾಣಿ’ಯೊಂದಿಗೆ ಮಾತನಾಡಿದ ವಂಚನೆ ಗೊಳಗಾದ ಸಣ್ಣೀರಮ್ಮ ಸೊಸೈಟಿಯಿಂದ 20 ಸಾವಿರ ರೂ. ಸಾಲ ನಿಮಗೆ ಮಂಜೂರಾಗಿದ್ದು, ದಾಖಲೆ ಸಹಿತ ನೋಂದಣಿ ಕಚೇರಿಗೆ ಬರುವಂತೆ ತಿಳಿಸಿದ್ದರು. ಅದೇ ರೀತಿ ಬಂದಾಗ ಕ್ರಯಕ್ಕೆ ಪಡೆಯುತ್ತಿರುವ ವಿಚಾರ ತಿಳಿಸದೆ ನನ್ನಿಂದ ಸಹಿ ಪಡೆದು ಕ್ರಯ ಮಾಡಿಸಿ ಕೊಂಡಿದ್ದಾರೆ. ಅಲ್ಲದೇ ಈ ವಿಷಯವನ್ನು ತಿಂಗಳು ಕಳೆಯುವ ತನಕ ಯಾರಿಗೂ ಹೇಳಬಾರದು ಎಂದು ತಿಳಿಸಿದ್ದರು. ನಂತರ ನಾನು ಮೋಸಹೋದ ವಿಚಾರ ತಿಳಿದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದ್ದು, ಖಾತೆ ಮಾಡುವ ಪ್ರಕ್ರಿಯೆಗೆ ತಡೆ ನೀಡುವಂತೆ ಮನವಿ ಮಾಡಿದ್ದು, ಈಗ ಠಾಣೆಗೆ ಇವರ ವಿರುದ್ಧ ದೂರನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಮುಖಂಡರಾದ ಮರಿತಿಮ್ಮನಹಳ್ಳಿ ಶಿವಣ್ಣ ಮಾತನಾಡಿ, ಇಂಥ ವಂಚನೆ ಮಾಡುವ ಒಂದು ದೊಡ್ಡ ತಂಡವೇ ಇದ್ದು, ಅಮಾಯಕರು ಎಚ್ಚೆತ್ತುಕೊಳ್ಳಬೇಕು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯೆತೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಸಂಜೀವಪುರದ ರವಿಯಾದವ್, ರವೀಶಾರಾಧ್ಯ, ಎಳನೀರು ಮಂಜುನಾಥ್, ಕಾಟಯ್ಯ, ಗ್ರಾಪಂ ಸದಸ್ಯ ಗೋವಿಂದರಾಜು, ನಟರಾಜು, ಜಡೆಗೊಂಡನಹಳ್ಳಿ ಸತೀಶ್ ಹಾಗೂ ನೂರಾರು ಸಾರ್ವಜನಿಕರು ಇದ್ದರು.