ಪಾಟ್ನಾ: ಬಿಹಾರ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡುವ ಸುಳಿವು ಸಿಕ್ಕಿದ್ದು, “ಉದ್ಯೋಗಕ್ಕಾಗಿ ಜಮೀನು’ ಹಗರಣ ಸಂಬಂಧ ಸದ್ಯದಲ್ಲೇ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಸಿಬಿಐ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಯುಪಿಎ-1ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಹಗರಣವು ಅತಿದೊಡ್ಡ ವಂಚನೆಯಾಗಿ ಹೊರಹೊಮ್ಮಲಿದ್ದು, ಪ್ರಕರಣ ಸಂಬಂಧ ತೇಜಸ್ವಿ ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖೀಸಿ ನ್ಯೂಸ್18 ವರದಿ ಮಾಡಿದೆ.
ಕಳೆದ ತಿಂಗಳು ಸಿಬಿಐ ನಡೆಸಿದ ದಾಳಿ ವೇಳೆ ಹಾರ್ಡ್‌ಡಿಸ್ಕ್ವೊಂದು ಸಿಕ್ಕಿತ್ತು. ಅದರಲ್ಲಿ ಉದ್ಯೋಗಕ್ಕಾಗಿ ತಮ್ಮ ಜಮೀನನ್ನು ಲಾಲು ಕುಟುಂಬಕ್ಕೆ ಲಂಚವಾಗಿ ನೀಡಿರುವ 1,458 ಅಭ್ಯರ್ಥಿಗಳ ಪಟ್ಟಿಯಿತ್ತು. ಈ ಪಟ್ಟಿಯನ್ನು ಸಿದ್ಧಪಡಿಸಿದ್ದೇ ತೇಜಸ್ವಿ ಯಾದವ್ ಎಂದು ಮೂಲಗಳು ತಿಳಿಸಿವೆ. ಈ ಅಭ್ಯರ್ಥಿಗಳ ಪೈಕಿ 16 ಮಂದಿಯನ್ನು ಸಿಬಿಐ ವಿಚಾರಣೆ ನಡೆಸಿದಾಗ ಹಗರಣ ನಡೆದಿರುವುದು ದೃಢಪಟ್ಟಿದೆ. ಸದ್ಯದಲ್ಲೇ ಈ ಎಲ್ಲ ಅಭ್ಯರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ರೈಲ್ವೆ ಇಲಾಖೆಗೆ ಸಿಬಿಐ ಪತ್ರ ಬರೆಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಲಾಲು ಪುತ್ರ ತೇಜಸ್ವಿ ವಿರುದ್ಧ ಪ್ರಬಲ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಬುಧವಾರವಷ್ಟೇ ಆರ್‌ಜೆಡಿಯ ಹಲವು ನಾಯಕರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ದಾಳಿ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಸಿಎಂ ನಿತೀಶ್ ಕುಮಾರ್, “ಏನೇನಾಗುತ್ತೆ ಎಂದು ನೀವೆಲ್ಲರೂ ನೋಡ್ತಾ ಇರಿ’ ಎಂದಷ್ಟೇ ಹೇಳಿದ್ದಾರೆ.
ಇದು ದ್ವೇಷದ ರಾಜಕಾರಣ. ದೆಹಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರಿಗೆ ಬಿಹಾರದ ಶಕ್ತಿಯೇನು ಎಂಬುದು ಗೊತ್ತಿಲ್ಲ. ಬೆದರಿಸುವ ತಂತ್ರ ನಮ್ಮ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ.
– ತೇಜಸ್ವಿ ಯಾದವ್, ಬಿಹಾರ ಡಿಸಿಎಂ