ಹುಬ್ಬಳ್ಳಿ: ರಾಜ್ಯ ಸರಕಾರ ಜಿಂದಾಲ್ ಸಂಸ್ಥೆಗೆ ಸುಮಾರು 3667 ಎಕರೆ ಜಮೀನು ನೀಡಲು ಹೊರಟಿರುವ ನಿರ್ಣಯ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಜನ ಸಂಗ್ರಾಮ ಪರಿಷತ್, ಎನ್‌ಸಿಪಿಎನ್‌ಆರ್, ಸಿಟಿಜನ್ ಫಾರ್ ಡೆಮಾಕ್ರಸಿ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೇವಲ 1.22 ಲಕ್ಷ ರೂ.ಗೆ ಒಂದು ಎಕರೆ ಭೂಮಿ ನೀಡುವ ನಿರ್ಧಾರ ಆತಂಕಕಾರಿ. ಇದರಿಂದ ಸರಕಾರದ ಬೊಕ್ಕಸಕ್ಕೆ ತುಂಬಾ ನಷ್ಟವಾಗುತ್ತದೆ. ಜಿಂದಾಲ್ ಸಂಸ್ಥೆಯು ಸರಕಾರಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ಪಾವತಿಸಿಲ್ಲ. ಅದನ್ನು ಮೊದಲು ವಸೂಲಿ ಮಾಡಲು ಕ್ರಮತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾದ ಸಂಪುಟ ಟಿಪ್ಪಣಿಯಲ್ಲಿ ವಾಸ್ತವ ಅಂಶಗಳನ್ನು ಮರೆಮಾಚಲಾಗಿದೆ. ಅಡ್ವೋಕೇಟ್ ಜನರಲ್ ಅವರು ಜಿಂದಾಲ್ಗೆ ಅನುಕೂಲವಾಗುವ ರೀತಿ ಸಲಹೆ ನೀಡಿದ್ದಾರೆಂದು ಆರೋಪಿಸಿದರು.