Advertisement

ಜಿಲ್ಲಾಧಿಕಾರಿಗಳ ಸಭೆಗಾಗಿ ಕಾಯುತ್ತಿರುವ ಜಮೀನು ಕಡತ

10:45 AM May 18, 2018 | |

ಹಳೆಯಂಗಡಿ: ಹಲವು ವರ್ಷಗಳ ಬೇಡಿಕೆಯಾಗಿರುವ ಹಳೆಯಂಗಡಿ ಇಂದಿರಾನಗರದ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿ ಸಿದ ಜಮೀನು ಪರಾಬಾರೆಯ ಕಡತವು ದ.ಕ.ಜಿಲ್ಲಾಧಿಕಾರಿಗಳ ವಿಶೇಷ ಸಭೆಗಾಗಿ ಕಾಯುತ್ತಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಪಕ್ಷಿಕೆರೆಯಾಗಿ ಹಳೆಯಂಗಡಿ ಸಂಪರ್ಕಿಸುವ ಈ ಪ್ರಮುಖ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹಾಗೂ ಸಂಚಾರದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಉದ್ದೇಶದಿಂದ ಇಲ್ಲಿನ ಗೇಟ್‌ ನಂ. 89ಗೆ ಮೇಲ್ಸೇತುವೆಯ ಪ್ರಸ್ತಾವನೆಯೂ ಜನಪ್ರತಿನಿಧಿಗಳ ಮೂಲಕ ನೀಡಲಾಗಿದೆ.

ಹಳೆಯಂಗಡಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಪ್ರಸ್ತಾವನೆ, ಮೂಲ್ಕಿ ಜನಸ್ಪಂದನ ಕಾರ್ಯಕ್ರಮದಲ್ಲಿ ಬೇಡಿಕೆ, ಸಂಸದ ನಳಿನ್‌ ಕುಮಾರ್‌ ಹಾಗೂ ಈ ಹಿಂದೆ ಶಾಸಕರಾಗಿದ್ದ ಕೆ.ಅಭಯಚಂದ್ರರಿಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಸ್ಥಳೀಯ ಇಂದಿರಾನಗರದ ರಿಲಾಯನ್ಸ್‌ ಅಸೋಸಿಯೇಶನ್‌ ಸಾಮಾಜಿಕ ಸೇವಾ ಸಂಸ್ಥೆಯು ಪೋಸ್ಟ್‌ ಕಾರ್ಡ್‌ ಗಳ ಮೂಲಕ ಸಹಿ ಸಂಗ್ರಹದೊಂದಿಗೆ ಆಂದೋಲನವನ್ನು ಸಹ ನಡೆಸಿತ್ತು. ದಿನ ನಿತ್ಯ ಇಲ್ಲಿ ಸಂಚರಿಸುವ ವಾಹನಗಳ ಮಾಲಕರ ಅವ್ಯವಸ್ಥೆ ಕಂಡು ಕಿನ್ನಿಗೋಳಿಯ ಶಾಲಾ ಬಾಲಕಿಯೋರ್ವಳು ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಗಮನ ಸೆಳೆದಿದ್ದಳು.

ಕಂದಾಯ ಇಲಾಖೆಯ ಮಾಹಿತಿಯಂತೆ ಇಲ್ಲಿ ಮೇಲ್ಸೇತುವೆಗೆ ಸ್ವತಃ ಕೊಂಕಣ ರೈಲ್ವೇ ಸಂಸ್ಥೆ ಮುಂದಾಗಿದೆ. ಅದಕ್ಕಾಗಿ ಮೂರು ಕಡೆಗಳಲ್ಲಿ ಜಮೀನನ್ನು ಸೂಚಿಸಲಾಗಿದೆ. ಅಂತಿಮವಾಗಿ ಕಲ್ಲಾಪು ರೈಲ್ವೇ ಕ್ರಾಸಿಂಗ್‌ ಹಾಗೂ ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ನ ನಡುವಿನ ಜಮೀನಿನಲ್ಲಿ (ಇಲ್ಲಿ ಸರಕಾರಿ ಜಮೀನು ಸಹ ಇದೆ) ಮೇಲ್ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇಲ್ಲಿಂದ ನೇರವಾಗಿ ಹೆದ್ದಾರಿಗೆ ಸಂಪರ್ಕಿಸುವ ಲ್ಯಾಂಡ್‌ ಮಾರ್ಕ್‌ನ್ನು ಗುರುತಿಸಲಾಗಿದ್ದು, ಇದಕ್ಕಾಗಿ ಖಾಸಗಿ ಜಮೀನನ್ನು ಸಹ
ಉಪಯೋಗಿಸುವ ಸಾಧ್ಯತೆ ಇದೆ.

ಈಗಾಗಲೇ ರೂಪಿಸಿರುವ ಸುಮಾರು 5 ಕೋ.ರೂ. ವೆಚ್ಚದ ಈ ಮೇಲ್ಸೇತುವೆ ನಿರ್ಮಾಣವಾದಲ್ಲಿ ಇಲ್ಲಿನ ಸಂಚಾರವು ಸುವ್ಯವಸ್ಥೆಯಾಗಿ ಸಾಗಲಿದೆ ಎಂಬ ಆಶಯ ಸ್ವತಃ ರೈಲ್ವೇ ಇಲಾಖೆಗೂ ಇದೆ.

Advertisement

ಮೇಲ್ಸೇತುವೆಗೆ ನಿರ್ಮಾಣಕ್ಕೆ ಇಲಾಖೆ ಸಿದ್ಧ
ಹಳೆಯಂಗಡಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಇಲಾಖೆ ಹಾಗೂ ಸರಕಾರದ ಸಮಪಾತದಲ್ಲಿ ಕೊಂಕಣ ರೈಲ್ವೇ ಇಲಾಖೆ ಸಿದ್ಧವಿದೆ. ಜಮೀನು ಸರಕಾರದಿಂದ ಹಸ್ತಾಂತರವಾದರೆ ಯೋಜನೆಗೆ ಚಾಲನೆ ಸಿಕ್ಕಂತಾಗುತ್ತದೆ. ಅಧಿಕಾರಿಗಳ ಸಭೆಯಲ್ಲಿ ಪ್ರತೀ ಬಾರಿಯು ಸಂಸದರು ಹಾಗೂ ಶಾಸಕರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆದು ಅಂತಿಮ ನಿರ್ಧಾರ ಮಾತ್ರ ಬಾಕಿಯಾಗಿದೆ.
– ಸುಧಾ ಕೃಷ್ಣಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ ರೈಲ್ವೇ ಮಂಗಳೂರು

ದಿನಕ್ಕೆ 60 ಬಾರಿ ಗೇಟ್‌
ರೈಲ್ವೇ ಇಲಾಖೆಯ ಟಿವಿಯುಎಸ್‌ ಸಮೀಕ್ಷೆ ಪ್ರಕಾರ ಕನಿಷ್ಠ 60 ಸಾವಿರ ವಾಹನಗಳ ಸಂಚಾರ ಇದ್ದರೆ (ನಾಲ್ಕು ಚಕ್ರಕ್ಕಿಂತ ಮೇಲೆ) ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಅದರಂತೆ ಹಳೆಯಂಗಡಿಯಲ್ಲಿ ಪ್ರಸ್ತುತ 2 ಲಕ್ಷ ವಾಹನಗಳ ಸಂಚಾರವಿದೆ ಎಂದು ವರದಿ ನೀಡಿದೆ. ಇಲ್ಲಿ ದಿನಕ್ಕೆ ಅಂದಾಜು 30 ರೈಲು ಸಂಚರಿಸುವಾಗ 60 ಬಾರಿ ಗೇಟ್‌ ಹಾಕಲಾಗುತ್ತದೆ. ಆಗ ಇಲ್ಲಿ ಅಕ್ಕಪಕ್ಕ ನಿಲ್ಲುವ ವಾಹನಗಳು ಚಾಲನೆಯ ಸ್ಥಿತಿಯಲ್ಲಿಯೇ ಇದ್ದರೆ ಅದರಲ್ಲಿನ ಇಂಧನಗಳ ನಷ್ಟವು ಸಹ ಈ ಸಮೀಕ್ಷೆಯಲ್ಲಿ ವರದಿಯಾಗಿದೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next