Advertisement

ಭೂ ಕುಸಿತ; ಮುಂದುವರಿದ ಅಧ್ಯಯನ

02:37 PM Nov 01, 2019 | Suhan S |

ನರಗುಂದ: ದಶಕದಿಂದ ಸಾರ್ವಜನಿಕರ ನಿದ್ದೆಗೆಡಿಸಿದ ಅಂತರ್ಜಲ ಹೆಚ್ಚಳದಿಂದ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣ ಕಂಡು ಹಿಡಿಯಲು ಆಗಮಿಸಿದ ವಿಜ್ಞಾನಿಗಳ ತಂಡ 2 ದಿನಗಳಿಂದ ಅಧ್ಯಯನ ನಡೆಸಿದೆ.

Advertisement

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಆದೇಶ ಮೇರೆಗೆ ಇಲಾಖೆ ನಿರ್ದೇಶನದೊಂದಿಗೆ ಭೂ ವಿಜ್ಞಾನಿ ಬಿ.ಜಿ. ದಿಲೀಪಕುಮಾರ ನೇತೃತ್ವದ ವಿಜ್ಞಾನಿಗಳ ತಂಡ 2ನೇ ದಿನ ಗುರುವಾರವೂ ಕುಡಿವ ನೀರಿನ ಜಲಾಶಯ ಕೆಂಪಗೆರಿ ದಂಡೆಯಲ್ಲಿದ್ದ ಕಲ್ಲೊಂದರ ಜಾಡು ಹಿಡಿದು ಹೋಗಿ ದೇಸಾಯಿ ಬಾವಿಯಿಂದ ಗುಡ್ಡದವರೆಗೆ ಅಧ್ಯಯನ ನಡೆಸಿದೆ.

ಕಲ್ಲೊಂದರ ಜಾಡು: ಗುಡ್ಡದ ವಾರೆಯಲ್ಲಿರುವ ಕೆಂಪಗೆರಿ ದಂಡೆಯಲ್ಲಿ ಕಂಡು ಬಂದ ಕಲ್ಲಿನ ಪಡೆಯೊಂದು ವಿಜ್ಞಾನಿಗಳ ಗಮನ ಸೆಳೆದಿದ್ದು, ಕೂಡಲೇ ಆ ಕಲ್ಲನ್ನು ತಪಾಸಿಸಿ ಅದರ ಜಾಡು ಹಿಡಿದು ದೇಸಾಯಿ ಬಾವಿ ಓಣಿಗೆ ತೆರಳಿ ಅಲ್ಲಿನ ಬಾವಿ ನೀರು ಖಾಲಿ ಮಾಡಿದ್ದರಿಂದ ಅಂತರ್ಜಲ ದಿಕ್ಕು ಪರಿಶೀಲನೆ ನಡೆಸಿದೆ. ಅಲ್ಲಿಂದ ಗುಡ್ಡದ ಮುಂಭಾಗ ವೆಂಕಟೇಶ್ವರ ದೇವಸ್ಥಾನ ಎದುರಿಗೆ ಗುಡ್ಡದ ವಾರೆಯಲ್ಲಿ ಕಲ್ಲಿನ ಪಡುವು ಪರಿಶೀಲಿಸಿತ್ತಲ್ಲದೇ, ಗುಡ್ಡದ ಕಲ್ಲುಗಳ ಪಡುವಿನ ಗುಣ ಲಕ್ಷಣ ಅವಲೋಕಿಸಿದೆ. ನಂತರ ಎರಡು ತಂಡಗಳಾಗಿ ಬೇರ್ಪಟ್ಟು ಎನ್‌ಬಿಸಿ ಕಾಲುವೆ ಮತ್ತು ಗುಡ್ಡ ಬದಿಗೆ ಮೇಲ್ಭಾಗದಲ್ಲಿ ಯಾತಾಳ ಸ್ವಾಮಿ ಗುಡಿ ಬಳಿ ತೆರಳಿ ಗುಡ್ಡದ ಇಳಿಜಾರು ಪ್ರದೇಶ ವೀಕ್ಷಿಸಿತು.

ಡೊಲೋರೇಟ್‌ ಕಲ್ಲು?: ವಿಜ್ಞಾನಿಗಳು ಗುರುತಿಸಿದಂತೆ ಕೆಂಪಗೆರಿ ದಂಡೆಯಲ್ಲಿ ಗೋಚರಿಸಿದ ಕಲ್ಲು ಡೊಲೋರೇಟ್‌ಎನ್ನಲಾಗಿದ್ದು, ವಿಶೇಷವಾಗಿ ಈ ಕಲ್ಲು ಬೆಲ್‌ ನಂತೆ ವಿಸ್ತಾರ ಹೊಂದಿದೆ. ಬೇರೆ ಕಲ್ಲಿನ ಮಧ್ಯ ಕೊರೆದು ಮುಂದೆ ಸಾಗಿರುತ್ತದೆ. ಈ ಕಲ್ಲು ಭೂಮಿಯೊಳಗೆ ತಡೆಗೋಡೆಯಂತೆ ನಿರ್ಮಾಣವಾಗಿ ಅಂತರ್ಜಲ ಒಂದು ಕಡೆಗೆ ತಡೆ ಹಿಡಿಯುತ್ತದೆ ಎನ್ನಲಾಗಿದೆ.

ಹಗೇವಿನಿಂದ ಸಿದ್ದೇಶ್ವರ ಗುಡಿವರೆಗೆ: ಬೆಳಗ್ಗೆ ಲಯನ್ಸ್‌ ಕನ್ನಡ ಮಾಧ್ಯಮ ಶಾಲೆ ಹಿಂಭಾಗ ಪುರಸಭೆ ನಿರ್ಮಿಸಿದ ತಡೆಗೋಡೆಯೊಂದನ್ನು ಅವಲೋಕಿಸಿದ ವಿಜ್ಞಾನಿಗಳು, ಅಲ್ಲಿ ಪದರಿನಿಂದ ಕೂಡಿದ ಕಲ್ಲೊಂದರ ಜಾಡು ಹಿಡಿದು ಗುಡ್ಡದ ಎತ್ತರ ಪ್ರದೇಶದಲ್ಲಿನ ಸಿದ್ದೇಶ್ವರ ದೇವಸ್ಥಾನವರೆಗೆ ತೆರಳಿ ಬಳಿಕ ಕಾಂಕ್ರೀಟ್‌ ರಸ್ತೆ ಮೂಲಕ ಪರಿಶೀಲನೆ ಮಾಡುತ್ತ ಕೆಳಗಿಳಿದರು. ಒಟ್ಟಾರೆ ಪಟ್ಟಣದಲ್ಲಿ ಭೂ ಕುಸಿತಕ್ಕೆ ಕಾರಣವಾದ ಅಂತರ್ಜಲ ಯಾವ ಭಾಗದಿಂದ ಪಟ್ಟಣದೊಳಗೆ ಪ್ರವೇಶಿಸುತ್ತದೆ ಎಂಬುದರ ಸಮಗ್ರ ಅಧ್ಯಯನ ನಡೆಸಿದರು. ದೇಸಾಯಿ ಬಾವಿಗೆ ಗುಡ್ಡದ ಕಡೆಗೆ ಉತ್ತರ ಭಾಗದಿಂದ ಅಂತರ್ಜಲ ಹರಿದು ಬರುತ್ತಿದೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗಿದೆ.

Advertisement

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next