Advertisement

ಭೂಮಿ-ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ

03:26 PM Apr 23, 2022 | Team Udayavani |

ಹಾವೇರಿ: ನಾವೆಲ್ಲರೂ ಭೂತಾಯಿ ಮಡಿಲಲ್ಲಿದ್ದೇವೆ. ಭೂಮಿ ಮತ್ತು ಪರಿಸರ ಇಲ್ಲದೇ ಬದುಕು ಅಸಾಧ್ಯವಾಗಿದೆ. ಹಾಗಾಗಿ, ಭೂಮಿ ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.

Advertisement

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಜರುಗಿದ ವಿಶ್ವ ಭೂಮಿ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಉದ್ದೇಶದಿಂದ ವಿಶ್ವಭೂಮಿ ದಿನ ಆಚರಿಸಲಾಗುತ್ತಿದೆ. ಇದು ಕೇವಲ ಆಚರಣೆಯಾಗಿ ಉಳಿದೇ ಕಾರ್ಯರೂಪಕ್ಕೆ ಬರಬೇಕು. ಗಣಿಗಾರಿಕೆ, ಜಲ ಮತ್ತು ವಾಯು ಮಾಲಿನ್ಯದಿಂದ ಪರಿಸರ ಕಲುಷಿತವಾಗುತ್ತಿದೆ ಹಾಗೂ ಅರಣ್ಯ ನಾಶವಾಗುತ್ತಿದೆ. ಸಕಲ ಜೀವ ಸಂಕುಲಕ್ಕೆ ಅರ್ಥಪೂರ್ಣ ಬುದುಕು ನೀಡಿರುವ ಭೂಮಿ ಸಂರಕ್ಷಣೆಯಲ್ಲಿ ವಿಫಲರಾಗಿದ್ದೇವೆ. ಭೂಮಿ ಪ್ರಾಮುಖ್ಯತೆ ಕುರಿತು ಎಲ್ಲರೂ ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.

ಪರಿಸರ ಸಂರಕ್ಷಣೆ ಎಲ್ಲರ ಮೂಲಭೂತ ಕರ್ತವ್ಯವಾಗಿದೆ. ಭೂಮಿ ಸಂರಕ್ಷಣೆ ಕುರಿತು ಗ್ರಾಮ ಮಟ್ಟದಿಂದಲೇ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ. ಪರಿಸರ ಸಂರಕ್ಷಣೆಗೆ ಕೇವಲ ಅ ಧಿಕಾರಿಗಳಲ್ಲದೇ ಎಲ್ಲರೂ ಕೈಜೋಡಿಸೋಣ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ|ಸುಧಾ ಸೌಮ್ಯಲತ ಎಂ.ಕೆ. ಮಾತನಾಡಿ, ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಭೂಮಿ ಮತ್ತು ಪರಿಸರ ಪೂರಕವಾಗಿದೆ. ಭೂಮಿಯಲ್ಲಿ ಹೇರಳ ಸಂಪನ್ಮೂಲವಿದ್ದು, ಅದನ್ನು ಮಿತವಾಗಿ ಹಾಗೂ ವೈಜ್ಞಾನಿಕವಾಗಿ ಬಳಸಬೇಕು. ಆದರೆ, ಇಂದು ಗಣಿಗಾರಿಕೆ, ಅರಣ್ಯ ನಾಶ, ಅತಿಯಾದ ರಸಗೊಬ್ಬರ, ಕೀಟನಾಶಕ ಬಳಕೆ ಹಾಗೂ ಪ್ಲಾಸ್ಟಿಕ್‌ ಬೆಳಕೆಯಿಂದ ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಅರಣ್ಯ ನಾಶಗೊಂಡು ಭೂಮಿ ಕಲುಷಿತವಾಗುತ್ತಿದೆ. ಮಾಲಿನ್ಯ ತಡೆಯದಿದ್ದರೆ ಭೂಮಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

Advertisement

ಸಕಲ ಜೀವ ಸಂಕುಲಕ್ಕೆ ಭೂಮಿ ಆಧಾರವಾಗಿದೆ. ಸೌರಮಂಡಲದಲ್ಲಿ ವೈವಿಧ್ಯಮಯ ಜೀವರಾಶಿ ಹೊಂದಿದ ಏಕೈಕ ಗೃಹ ಭೂಮಿ. ಇದನ್ನು ಉಳಿಸಿ ಬೆಳೆಸುವುದು ಹಾಗೂ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ ಹಸ್ತಾಂತರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ತಾಜ್ಯ ನಿರ್ವಹಣೆಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಬೇಕು. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಕೆ ಕಡಿಮೆಗೊಳಿಸಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಮಳೆ ನೀರು ಕೊಯ್ಲು ಮಾಡಿ ಇಂಗುಗುಂಡಿ ನಿರ್ಮಿಸಿ ನೀರು ಸಂರಕ್ಷಿಸಬೇಕು. ಈ ಕಾರ್ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು. ನೀರು ಮತ್ತು ಪರಿಸರ ಮಾಲಿನ್ಯವಾಗಂದತೆ ಎಚ್ಚರ ವಹಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಗಿರೀಶ ಸ್ವಾದಿ ಮಾತನಾಡಿ, ಭೂಮಿ ಸಮತೋಲನ ಕಾಪಾಡಬೇಕು. ಇಲ್ಲವಾದರೆ ಪ್ರಕೃತಿ ವಿಕೋಪದಂತಹ ಅವಘಡಗಳು ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನಿಗಾ ವಹಿಸಬೇಕು ಹಾಗೂ ಭೂಮಿ ಉಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ ಸ್ವಾಗತಿಸಿ, ಉಪ ತಹಶೀಲ್ದಾರ್‌ ಅಂಕನಕೊಪ್ಪ ವಂದಿಸಿದರು.

ಪರಿಸರ ಸಂರಕ್ಷಣೆ ಎಲ್ಲರ ಮೂಲಭೂತ ಕರ್ತವ್ಯವಾಗಿದೆ. ಭೂಮಿ ಸಂರಕ್ಷಣೆ ಕುರಿತು ಗ್ರಾಮ ಮಟ್ಟದಿಂದಲೇ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ. ಪರಿಸರ ಸಂರಕ್ಷಣೆಗೆ ಕೇವಲ ಅಧಿಕಾರಿಗಳಲ್ಲದೇ ಎಲ್ಲರೂ ಕೈಜೋಡಿಸಬೇಕು. -ಪುಟ್ಟರಾಜು, ಹಿರಿಯ ದಿವಾಣಿ ನ್ಯಾಯಾಧೀಶರು, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next