ಬೆಂಗಳೂರು: ತಲೆಯ ಮೇಲೆ ಮಲ ಹೊರುವ ಹಾಗೂ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಮಾಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ, ರಾಜ್ಯ ರಾಜಧಾನಿಯಲ್ಲಿ ಅದಿನ್ನೂ ಜೀವಂತವಾಗಿದೆ.
ಮ್ಯಾನ್‌ಹೋಲ್‌ಗಳನ್ನು ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛ ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನ ಇದೆ. ಆದರೂ, ನಗರದಲ್ಲಿ ಪೌರ ಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛ ಮಾಡುತ್ತಿರುವ ದೃಶ್ಯ ಇಂದಿಗೂ ಕಾಣ ಸಿಗುತ್ತಿದೆ ಎಂದರೆ, ಪ್ರಜ್ಞಾವಂತ ನಾಗರಿಕರು ಹಾಗೂ ಆಡಳಿತ ವ್ಯವಸ್ಥೆ ತಲೆತಗ್ಗಿಸಲೇ ಬೇಕು.
ಶೇಷಾದ್ರಿಪುರಂ ವಾರ್ಡ್‌ನ ಪೈಪ್‌ಲೈನ್ ಭಾನುವಾರ ಪೌರ ಕಾರ್ಮಿಕರೊಬ್ಬರು ಮ್ಯಾನ್‌ಹೋಲ್ ಸ್ವಚ್ಛಮಾಡುಲು ಮ್ಯಾನ್‌ಹೋಲ್ ಗುಂಡಿಗೆ ಇಳಿದಿದ್ದರು. ಸುಮಾರು 10 ನಿಮಿಷಕ್ಕೂ ಅಧಿಕ ಕಾಲ ಗುಂಡಿಯ ಒಳಗೆ ಇದ್ದು, ಸಂಪೂರ್ಣವಾಗಿ ಸ್ವಚ್ಛಮಾಡಿದ ನಂತರ ಮೇಲೆ ಬಂದರು.
ಸ್ವಚ್ಛ ಮಾಡುವಾಗ ಕೈಗೆ ಗ್ಲೌಸ್ ಬಳಸಬೇಕು ಮತ್ತು ಅದರ ವ್ಯವಸ್ಥೆ ಮಾಡದೇ ಇರುವುದು ಅತ್ಯಂತ ಅಮಾನವೀಯವಾಗಿದೆ. ಈ ಭಾಗದಲ್ಲಿ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಆಗಾಗ ಮೇಲೆ ಬರುತ್ತಿರುತ್ತದೆ. ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಪೌರ ಕಾರ್ಮಿಕರೇ ಬಂದು ಇದನ್ನು ಸ್ವಚ್ಛ ಮಾಡುತ್ತಾರೆ. ಕೆಲವೊಮ್ಮೆ ಸಕ್ಕಿಂಗ್ ಅಥವಾ ಜಟ್ಟಿಂಗ್ ಯಂತ್ರ ತರುತ್ತಾರೆ. ಕೆಲವೊಮ್ಮೆ ತರುವುದಿಲ್ಲ. ಬಿಬಿಎಂಪಿಯಿಂದ ಸೂಕ್ತ ಸೌಲಭ್ಯ ನೀಡದೇ ಇರುವುದರಿಂದ ಹೀಗಾಗಿದೆ ಎಂದು ಸ್ಥಳೀಯರು ಆರೋಪಿಸಿದರು.